ಲಾಕ್‌ಡೌನ್ ಪರಿಶೀಲನೆಗಾಗಿ ಕೇಂದ್ರ ತಂಡಗಳು ಇನ್ನೂ ನಾಲ್ಕು ರಾಜ್ಯಗಳಿಗೆ ಭೇಟಿ

ನವದೆಹಲಿ, ಏಪ್ರಿಲ್ 25, ರಾಷ್ಟ್ರವ್ಯಾಪಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಅನ್ನು ಕೆಲ ರಾಜ್ಯಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ,  ಪಶ್ಚಿಮ ಬಂಗಾಳ ಹೊರತಾಗಿ ಇನ್ನೂ ನಾಲ್ಕು ರಾಜ್ಯಗಳಿಗೆ ಕೇಂದ್ರ ತಂಡಗಳನ್ನು ಕಳುಹಿಸುತ್ತಿದೆ.ಮೂಲಗಳಂತೆ, ಲಾಕ್‌ಡೌನ್ ಅನುಷ್ಠಾನದ ಬಗ್ಗೆ ಖುದ್ದು ಪರಿಶೀಲಿಸಲು ಕೇಂದ್ರ ತಂಡಗಳನ್ನು ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣಕ್ಕೆ ಕಳುಹಿಸಲು ಸರ್ಕಾರ ಶನಿವಾರ ನಿರ್ಧರಿಸಿದೆ.ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವಿರುವ ಬಂಗಾಳಕ್ಕೆ ಕೇಂದ್ರ ತಂಡವೊಂದು ಭೇಟಿ ನೀಡಿರುವ ನಡುವೆಯೇ  ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.ಈ ಮಧ್ಯೆ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್ ಧಂಕಡ್ ಅವರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಪರಸ್ಪರ ಪ್ರಶ್ನಿಸುತ್ತಿದ್ದಾರೆ.
 ಬಂಗಾಳದಲ್ಲಿ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ ಮತ್ತು ರಾಜ್ಯದಲ್ಲಿ ಕಡಿಮೆ' ಪ್ರಮಾಣದ ಪರೀಕ್ಷೆಗಳ ಸಂಖ್ಯೆಯನ್ನು ರಾಜ್ಯಪಾಲರು ಪ್ರಶ್ನಿಸುತ್ತಿದ್ದರೆ, 'ಅನಗತ್ಯವಾಗಿ ರಾಜ್ಯಪಾಲರು ಮಧ್ಯಪ್ರವೇಶಿಸುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಕಿಡಿಕಾರುತ್ತಿದ್ದಾರೆ.ಕೊರೊನವೈರಸ್‍ ಸೋಂಕಿನಿಂದ ನಾಲ್ಕು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಇದುವರೆಗೆ ಕ್ರಮವಾಗಿ 301 ಮತ್ತು 127 ಸಾವುಗಳು ಸಂಭವಿಸಿವೆ.ಒಂದು ವಾರದ ಹಿಂದೆ ಕೇಂದ್ರ ಸರ್ಕಾರ, ಲಾಕ್‍ಡೌನ್‍ ಜಾರಿಯನ್ನು ಖುದ್ದು ಪರಿಶೀಲಿಸಲು ಅಂತರಸಚಿವಾಲಯದ ಕೇಂದ್ರೀಯ ತಂಡಗಳನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳಕ್ಕೆ ಕಳುಹಿಸಿತ್ತು. ಅದರಂತೆ ಈ ತಂಡಗಳು ಲಾಕ್‍ಡೌನ್‍ ಜಾರಿ ಕುರಿತು ವರದಿಯನ್ನು ಕೇಂದ್ರಕ್ಕೆ ನೀಡಲಿವೆ. ಈ ಮಧ್ಯೆ, ಲಾಕ್‌ಡೌನ್‌ ಅವಧಿ ಒಂದು ತಿಂಗಳು ಪೂರ್ಣಗೊಂಡ ಒಂದು ದಿನದ ನಂತರ ದೇಶಾದ್ಯಂತ ಕೋವಿಡ್-19 ಸೋಂಕಿನಿಂದ ಸಾವಿನ ಸಂಖ್ಯೆ  775 ಕ್ಕೆ ಏರಿದೆ.