ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಪಹಲ್ಗಾಮ ದಾಳಿಗೆ ಕಾರಣ: ಕೋಲಕಾರ

Central government's negligence is the reason for Pahalgam attack: Kolakar

ಗಜೇಂದ್ರಗಡ 25: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯವಾಗಿದ್ದು ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರವಾಗಿದೆ ಎಂದು ಅಂಜುಮನ್ ಇಸ್ಲಾಂ ಕಮೀಟಿ  ಮಾಜಿ ಚೇರಮನ್ನ ಎ ಡಿ ಕೋಲಕಾರ ಹೇಳಿದರು.  

ನಗರದ ಕೆ.ಕೆ.ಸರ್ಕಲ್ ನಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ವತಿಯಿಂದ  ಪಹಲ್ಗಾಮ್ ದಾಳಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಈ ಘಟನೆಯಲ್ಲಿ ಸುಮಾರು 28 ಜನ ಮೃತಪಟ್ಟಿರುವ ಭೀಕರವಾದ ಉಗ್ರರ ದಾಳಿ ನಡೆಯುವ ಮಾಹಿತಿ ಮೊದಲೇ ತಿಳಿಯದಿರುವುದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ದೇಶದ ಕೋಮು ಸೌಹಾರ್ದತೆ ಮತ್ತು ಶಾಂತಿಯನ್ನು ಕದಡುವ ಪ್ರಯತ್ನವಾಗಿದೆ. ಇದು ಮಾನವನ ಮೇಲೆ ನಡೆದ ದಾಳಿ ಮಾತ್ರವಲ್ಲ, ಭಾರತದ ಬಹುತ್ವ, ಶಾಂತಿ ಸಹಬಾಳ್ವೆಯ ಮೌಲ್ಯಗಳ ಮೇಲೆ ನಡೆಸಿದ ದಾಳಿಯಾಗಿದೆ ಎಂದರು.  

ಧರ್ಮದ ಹೆಸರಿನಲ್ಲಿ ಇಂತಹ ದಾಳಿಗಳನ್ನು ಮಾಡುವ ಭಯೋತ್ಪಾದಕರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ‘ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕುಟುಂಬದವರೊಂದಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ನಾವು ಜವಾಬ್ದಾರಿಯುತ ಭಾರತೀಯ ನಾಗರಿಕರಾಗಿ ಮತ್ತು ಶಾಂತಿ, ನ್ಯಾಯ ಹಾಗೂ ಮಾನವ ಜೀವನದ ಪಾವಿತ್ರ್ಯೆತೆಯನ್ನು ಎತ್ತಿ ಹಿಡಿಯುಲುಮುಂದಾಗಬೇಕಿದೆ. ಈ ಕರಾಳ ಶಕ್ತಿಗಳನ್ನು ಸುಮ್ಮನೆ ಬಿಡಬಾರದು. ಭಯೋತ್ಪಾದಕರನ್ನು ಪತ್ತೆ ಮಾಡಿ ಗಲ್ಲು ಶಿಕ್ಷೆ ವಿಧಿಸಲು ಮುಂದಾಗಬೇಕಿದೆ.  

ಅಂಜುಮಾನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ ಈ ದಾಳಿಯು ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಆಗಿದ್ದು ಪ್ರಧಾನಮಂತ್ರಿಗಳು, ಗೃಹ ಸಚಿವರು ನೈತಿಕ ಹೊಣೆಯನ್ನು ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ಈ ದುರಂತದಿಂದಾಗಿ ಕೀಳುಮಟ್ಟದ ದ್ವೇಷದ ಬೀಜಗಳು ಚಿಗುರಲು ಅವಕಾಶ ನೀಡಬಾರದು. ಅಂತರ್‌ಧರ್ಮಿಯ ಸಂವಾದ, ಪರಸ್ಪರ ಗೌರವ ಹಾಗೂ ಕೋಮು ಸಾಮರಸ್ಯವನ್ನು ಕಾಪಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು  ಮುಂದಾಗಬೇಕಿದೆ. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡು ಆಂತಕದಲ್ಲಿರುವ ಕುಟುಂಬಗಳಿಗೆ ಸೂಕ್ತ ಭದ್ರತೆ ಒದಗಿಸುವುದರೊಂದಿಗೆ    ಸರ್ಕಾರ  ಪರಿಹಾರ  ನೀಡಬೇಕು. ಸಾಮಾಜಿಕ ಜಾಲತಾಣ ದೃಶ್ಯ ಮಾಧ್ಯಮಗಳಲ್ಲಿ ಈ ದಾಳಿಯನ್ನು ಗುರಿಯಾಗಿಸಿಕೊಂಡು ಮುಸ್ಲಿಂ ಸಮಾಜದ ಬಗ್ಗೆ  ಹಸಿ-ಹಸಿ ಸುಳ್ಳುಗಳನ್ನು ಭಿತ್ತಿ  ಸಮುದಾಯದ ತೇಜೋವಧೆ ಮಾಡಿ, ದೇಶದ ಕೋಮುಸೌಹಾರ್ದತೆ ಹಾಳು ಮಾಡುತ್ತಿರುವ ಪಟ್ಟಭದ್ರ ಕೋಮುವಾದಿಶಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು. 

ಪುರಸಭೆ ಸದಸ್ಯ ರಾಜು ಸಾಂಗ್ಲಿಕಾರ ಮಾತನಾಡಿ ಬಹುತ್ವ ಭಾರತವನ್ನು ಒಡೆದು ಧರ್ಮ- ಧರ್ಮಗಳ ನಡುವೆ ವಿಷದ ಬೀಜ ಬಿತ್ತುವುದೊಂದರಿಗೆ ಈ ದೇಶವನ್ನು ವಿಭಜಿಸುವುದೇ ಅವರ ಗುರಿಯಾಗಿದ್ದು ಕೂಡಲೇ ಕೇಂದ್ರ ಸರ್ಕಾರ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳಬೇಕು. ಸರ್ವ ಜನಾಂಗದ ಶಾಂತಿಯ ತೋಟದಂತೆ ನಾವೆಲ್ಲರೂ  ಈ ಸಂದರ್ಭದಲ್ಲಿ ಒಗ್ಗಟ್ಟಿನಿಂದ  ನಿಲ್ಲಬೇಕಿದೆ ಎಂದರು. 

ಜಾಮೀಯಾ ಮಸೀದಿಯಿಂದ ಪ್ರಾರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ಕೆ.ಕೆ.ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನಾ ಮನವಿಯನ್ನು ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. 

ಪ್ರತಿಭಟನೆಯಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ, ಕಾರ್ಯದರ್ಶಿ ಫಯಾಜ್ ತೋಟದ, ಎಂ.ಬಿ.ಕಂದಗಲ್ಲ, ದಾದು ಹಣಗಿ, ಮುಸ್ತಾಕ ಹಕ್ಕಿ,   ಸುಭಾನಸಾಬ ಆರಗಿದ್ದಿ ಭಾಷಾ ಮುದಗಲ್ಲ,  ಖಾಸಿಂಸಾಬ ಮುಚ್ಚಾಲಿ,  ಅರಳಿಕಟ್ಟಿ,  ಮಾಸುಮಲಿ ಮದಗಾರ, ಇಮ್ರಾನ ಅತ್ತಾರ, ಸೇರಿದಂತೆ ಇತರರು ಇದ್ದರು.