ನವದೆಹಲಿ, ಏಪ್ರಿಲ್ 19, ಕೊರೊನವೈರಸ್ ತಡೆಗೆ ಘೋಷಿಸಲಾಗಿರುವ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಇ-ಕಾಮರ್ಸ್ ಕಂಪೆನಿಗಳು ಅಗತ್ಯೇತರ(ಅನಿವಾರ್ಯವಲ್ಲದ) ಸರಕುಗಳ ಸರಬರಾಜು ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಮೇ 3 ರವರೆಗೆ ಇ-ಕಂಪೆನಿಗಳು ಅನಿವಾರ್ಯ ವಸ್ತುಗಳನ್ನು ಪೂರೈಸುವುದನ್ನು ನಿಷೇಧಿಸಿ ಗೃಹ ಸಚಿವಾಲಯ ಭಾನುವಾರ ಆದೇಶ ಹೊರಡಿಸಿದೆ. ಏಪ್ರಿಲ್ 20 ರಿಂದ ಹಾಟ್ ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಮೊಬೈಲ್ ಫೋನ್,ರೆಫ್ರಿಜರೇಟರ್‌ಗಳಂತಹ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಅನೇಕ ಇ-ಕಾಮರ್ಸ್ ಸಂಸ್ಥೆಗಳು ಸಜ್ಜಾಗುತ್ತಿವೆ ಎಂಬ ವರದಿಗಳ ನಡುವೆ ಸರ್ಕಾರ ಈ ಆದೇಶ ಹೊರಡಿಸಿದೆ.ಅನೇಕ ಕಂಪೆನಿಗಳು ಏಪ್ರಿಲ್ 20 ರಿಂದ ಆರ್ಡರ್ ಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಲಾಕ್‌ಡೌನ್‌ನ ಮೊದಲ ಹಂತದ ಅವಧಿಯಲ್ಲೂ ಅನಿವಾರ್ಯವಲ್ಲದ ವಸ್ತುಗಳ ಪೂರೈಕೆಗೆ ಸರ್ಕಾರ ನಿಷೇಧಿಸಿತ್ತು. ಆದರೂ, ಏಪ್ರಿಲ್ 15 ರಂದು ಹೊರಡಿಸಲಾದ ವಿವರವಾದ ಮಾರ್ಗಸೂಚಿಗಳಲ್ಲಿ ಕೇಂದ್ರ ಸರ್ಕಾರ ಇ-ಕಾಮರ್ಸ್ ಕಂಪನಿಗಳಿಗೆ ಏಪ್ರಿಲ್ 20 ರಿಂದ ಕಾರ್ಯನಿರ್ವಹಿಸಲು ಅವಕಾಶ ನೀಡಿತ್ತು. ಗೃಹಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಿ, ಒಡಿಶಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದಂತಹ ಅನೇಕ ರಾಜ್ಯಗಳು ಹಾಟ್‍ಸ್ಪಾಟ್ ಅಲ್ಲದ ವಲಯಗಳಲ್ಲಿ ಏಪ್ರಿಲ್ 20 ರ ನಂತರ ಇ-ಕಾಮರ್ಸ್ ಕಾರ್ಯಾಚರಣೆಗೆ ಅನುಮತಿ ನೀಡಿದ್ದವು.