ಉದ್ಯೋಗಿಗಳಿಗೆ ‘ಆರೋಗ್ಯ ಸೇತು’ ಅಪ್ಲಿಕೇಷನ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ,ಏ ೨೯, ಕೊರೊನಾ ವೈರಸ್ ಹರಡುವುದನ್ನು ತಡೆಯಲು ಪ್ರತಿಯೊಬ್ಬರೂ ಆರೋಗ್ಯ ಸೇತು ಅಪ್ಲಿಕೇಶನ್  ಬಳಸಬೇಕು ಎಂದು  ಕೇಂದ್ರ   ಸರ್ಕಾರ  ಹೇಳುತ್ತಿದೆ.   ಕೊರೊನಾ ವೈರಾಣು    ಕುರಿತ  ಹೊಸ ಮಾಹಿತಿ ಜೊತೆಗೆ  ವೈರಸ್  ಹರಡದಂತೆ  ಪಾಲಿಸಬೇಕಾದ ಮುನ್ನೆಚ್ಚರಿಕೆಗಳು, ಕೇಂದ್ರ ಸರ್ಕಾರ  ಜಾರಿಗೊಳಿಸುತ್ತಿರುವ ನಿಯಂತ್ರಣ ಕ್ರಮಗಳನ್ನು  ನೀಡುವ  ಆರೋಗ್ಯ ಸೇತು  ಅಪ್ಲಿಕೇಷನ್  ಪ್ರತಿಯೊಬ್ಬ  ಉದ್ಯೋಗಿಯೂ  ಕಡ್ಡಾಯವಾಗಿ ಬಳಸಬೇಕು  ಎಂದು ಕೇಂದ್ರ ಸರ್ಕಾರ ಸೂಚಿಸಿದೆ.  
ಈ ನಿಟ್ಟಿನಲ್ಲಿ ಕೇಂದ್ರ   ಸರ್ಕಾರಿ  ಉದ್ಯೋಗಿಗಳ    ಸುರಕ್ಷತೆ  ದೃಷ್ಟಿಯಿಂದ  ಮತ್ತಷ್ಟು ಮಾರ್ಗಸೂಚಿಗಳನ್ನು  ಬುಧವಾರ ಬಿಡುಗಡೆ ಮಾಡಿದೆ.  ಕೇಂದ್ರ ಸರ್ಕಾರ ಸ್ವಾಮ್ಯದ  ಕಛೇರಿ ಮತ್ತಿತರ ಕಡೆ  ಕಾರ್ಯನಿರ್ವಹಿಸುವ  ಅಧಿಕಾರಿಗಳು, ಸಿಬ್ಬಂದಿ  ಹಾಗೂ  ಹೊರಗುತ್ತಿಗೆ ಸಿಬ್ಬಂದಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ  ಸೇತು ಅಪ್ಲಿಕೇಶನ್  ಡೌನ್ ಲೋಡ್  ಮಾಡಿಕೊಳ್ಳುವುದನ್ನು  ಕಡ್ಡಾಯ ಎಂದು ಆದೇಶಿಸಿದೆ.
ಕಚೇರಿಗೆ  ಹೊರಡುವ ಮೊದಲು, ಕೇಂದ್ರ ಸರ್ಕಾರದ ಅಧಿಕಾರಿಗಳು  ಹಾಗೂ ಉದ್ಯೋಗಿಗಳು   ಆರೋಗ್ಯ ಸೇತು  ಅಪ್ಲಿಕೇಶನ್  ನಲ್ಲಿ   ತಮ್ಮ   ಸ್ಟೇಟಸ್  ಅನ್ನು   ಪರೀಕ್ಷಿಸಿಕೊಳ್ಳಬೇಕು.    ಅಪ್ಲಿಕೇಷನ್ ನಲ್ಲಿ   “ಸೇಫ್”   ಇಲ್ಲವೇ  “ಲೋ ರಿಸ್ಕ್”  ಎಂದು   ತೋರಿಸಿದರೆ  ಮಾತ್ರ  ಕಚೇರಿಗೆ ಬರಬೇಕು ಎಂದು ಸೂಚಿಸಿದೆ. 
ಒಂದುವೇಳೆ  ಬ್ಲೂಟೂತ್ ಸಾಮೀಪ್ಯ  ಆಧರಿಸಿ ಅಪ್ಲಿಕೇಶನ್‌ನಲ್ಲಿ  “ಮಾಡರೇಟ್” ಇಲ್ಲವೇ   “ಹೈ ರಿಸ್ಕ್” ಎಂದು  ಸ್ಟೇಟಸ್  ತೋರಿಸಿದರೆ    ಅಂತಹ ಅಧಿಕಾರಿ ಸಿಬ್ಬಂಧಿ   ಕಚೇರಿಗೆ ಬರುವ ಅಗತ್ಯವಿಲ್ಲ. ಅಂತಹವರು  ೧೪ ದಿನಗಳವರೆಗೆ ಸೆಲ್ಪ್ ಕ್ವಾರಂಟೈನ್ ಇರಲು  ಸೂಚಿಸಲಾಗುತ್ತದೆ.  ಆದರೆ ಅಪ್ಲಿಕೇಶನ್‌ನಲ್ಲಿ   ‘ಲೋ ರಿಸ್ಕ್’  ಅಥವಾ  ‘ಸೇಫ್’  ಎಂದು  ಸ್ಟೇಟಸ್    ತೋರಿಸುವವರೆಗೆ   ಅವರು  ಮನೆಯಲ್ಲಿಯೇ ಇರಬೇಕು.  ಈ  ಸೂಚನೆಗಳನ್ನು ಎಲ್ಲ ಕೇಂದ್ರ ಸಚಿವಾಲಯಗಳು ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಜಾರಿಗೊಳಿಸುವಂತೆ ಜಂಟಿ ಕಾರ್ಯದರ್ಶಿಗಳಿಗೆ  ಆದೇಶ ನೀಡಲಾಗಿದೆ.