ಬೆಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಶತಮಾನೋತ್ಸವ ಸಂಭ್ರಮ

ಬೆಂಗಳೂರು,  ಡಿ.19:         ನಮ್ಮ ವಿಶ್ವವಿದ್ಯಾಲಯಕ್ಕೆ ಮೂರು ಭಾರತ ರತ್ನಗಳು ಸಿಕ್ಕಿರುವುದು  ಹೆಮ್ಮೆಯ ವಿಷಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಆರ್.  ವೇಣುಗೋಪಾಲ್ ತಿಳಿಸಿದ್ದಾರೆ. 

ಇಂದು ನಗರದ ಜ್ಞಾನಭಾರತಿ  ಆವರಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ವಿಭಾಗದ  ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಪ್ರೊ  ಸಿ ಎನ್ ಆರ್ ರಾವ್, ಪ್ರೊ. ಸಿ ವಿ ರಾಮನ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ, ಈ ಮೂರು  ಭಾರತರತ್ನಗಳು ವಿಶ್ವವಿದ್ಯಾಲಯದ ಆಸ್ತಿ. ಸಸ್ಯ ಶಾಸ್ತ್ರದ ಹೆಚ್ಚಿನ ಕಲಿಕೆ ಮತ್ತು  ಸಂಶೋಧನೆಗಾಗಿ ಸಸ್ಯಉದ್ಯಾನಕ್ಕಾಗಿ ನಿರ್ಮಾಣಕ್ಕೆ ವಿಶ್ವವಿದ್ಯಾಲಯವು 50 ಎಕರೆ  ಜಮೀನನ್ನು ಮಂಜೂರು ಮಾಡಿದೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿಕ್ಷಕರ  ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಈಗಾಗಲೇ 44 ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ  ಮಾಡಲಾಗಿದೆ ಎಂದು ತಿಳಿಸಿದರು.  

ಸಸ್ಯ  ಉದ್ಯಾನದ ಶಂಕುಸ್ಥಾಪನೆಯನ್ನು ನೆರವೇರಿಸಿದ ಜಸ್ಟಿಸ್ ಸಂತೋಷ್ ಹೆಗಡೆ ಮಾತನಾಡಿ,  ಇಂದಿನ ಸಮಾಜದಲ್ಲಿ ಪ್ರಾಮಾಣಿಕತೆಗಿಂತಲೂ ಹಣ ಮತ್ತು ಅಧಿಕಾರಕ್ಕೆ ಹೆಚ್ಚು ಬೆಲೆ ಎಂದು  ವಿಷಾದಿಸಿದರು. ಮತ್ತೆ ನಮ್ಮ ಪರಂಪರೆಯನ್ನು ನೆನೆದು ಮಾನವೀಯ ಮೌಲ್ಯ, ನೈತಿಕತೆ ಮತ್ತು   ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಹಾಗೂ ಯುವಜನರು ಶಾಂತಿ  ಮತ್ತು ಸೌಹಾರ್ದತೆಯನ್ನು ಬೆಳೆಸಿಕೊಳ್ಳವ ಮೂಲಕ ಭವಿಷ್ಯದ ಭಾರತವನ್ನು ನಿರ್ಮಿಸಬೇಕು  ಎಂದು ಕರೆ ನೀಡಿದರು.

ಎರಡು  ದಿನದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಭೂಷಣ ಡಾ.ಪಿ  ಬಲರಾಮ್ ಮಾತನಾಡಿ, ಇಂದಿನ ರಾಜಕಾರಣಿಗಳಲ್ಲಿ, ನಿಜವಾದ ವಿಜ್ಞಾನಕ್ಕಿಂತ ಇತರೆ  ರಾಜಕಾರಣಿಗಳ ಅನುವಂಶೀಯ ಮತ್ತು ಕೆಮಿಸ್ಟ್ರಿಗಳನ್ನು ತಿಳಿಯುವ ಕುತೂಹಲ ಹೆಚ್ಚಿರುವುದು  ವಿಷಾದನೀಯ ಎಂದರು.  

ಭಾರತೀಯರಿಗೆ ಇತಿಹಾಸವೆಂದರೆ ಪೌರಾಣಿಕ  ಕಥೆಗಳಷ್ಟೇ ಆಗಿವೆ ಅದನ್ನು ಹೊರತುಪಡಿಸಿ ಹಲವಾರು ಇತಿಹಾಸಗಳು ನಮ್ಮ ನಡುವೆ  ನಶಿಸಿಹೋಗುತ್ತಿವೆ ಅವುಗಳನ್ನು ಉಳಿಸಿಕೊಳ್ಳುವ ಅಗತ್ಯತೆ ಇದೆ. ಪ್ರೊ. ಸಿ ವಿ ರಾಮನ್  ಇದ್ದಂತಹ ಸಸ್ಯ ಶಾಸ್ತ್ರ ವಿಭಾಗ ಇಂದು ನಮಗೆ ಕಾಣಲು ಸಿಗುತ್ತಿಲ್ಲ ಕಾರಣ  ನಮ್ಮಲ್ಲಿ ಇತಿಹಾಸವನ್ನು ದಾಖಲಿಸುವ ಜ್ಞಾನದ ಕೊರತೆ ಇದೆ. ಹಾಗೂ ನವೇಲ್ಲರೊ ನಾವು ಓದಿದ  ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡಿ ಅವುಗಳನ್ನು ಜೀರ್ಣೋದ್ಧಾರ ಮತ್ತು ಉಳಿಸಿಕೊಳ್ಳುವ  ಪ್ರಯತ್ನವನ್ನು ಮಾಡಬೇಕಿದೆ ಎಂದು ಹೇಳಿದರು.

ಶತಮಾನೋತ್ಸವ  ಸಂಭ್ರಮದ ಭಾಗವಾಗಿ ಆಯೋಜಿಸಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅಟ್ರಿ, ಆಯುಷ್  ಬ್ಯಾಬೂ ಸೊಸೈಟಿ ಮತ್ತು ಇತರೆ ಸಂಸ್ಥೆಗಳು ಭಾಗವಹಿಸಿದ್ದು ಸಾರ್ವಜನಿಕರ ವೀಕ್ಷಣೆಗೆ  ಇಂದು ಮತ್ತು ನಾಳೆ ಅವಕಾಶವಿದೆ.

ಕಾರ್ಯಕ್ರಮದಲ್ಲಿ  ಬೆಂಗಳೂರು ವಿಶ್ವವಿದ್ಯಾಲಯದ ರೆಜಿಸ್ಟಾರ್ ಪ್ರೊ. ಬಿ ಕೆ ರವಿ, ಕರ್ನಾಟಕದ ಮುಖ್ಯ  ಪೋಸ್ಟಲ್ ಜನರಲ್ , ಸಸ್ಯಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಬಿ  ಎಚ್ ಎಂ ನಿಜಲಿಂಗಪ್ಪ ಮತ್ತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಟಿ ಜಿ  ಉಮೇಶ್ ಉಪಸ್ಥಿತರಿದ್ದರು.