ಶತಾಯುಷಿಯ ಜನ್ಮ ಶತಮಾನೋತ್ಸವ ಸಮಾರಂಭ

ಲೋಕದರ್ಶನ ವರದಿ

ಚನ್ನಮ್ಮನ ಕಿತ್ತೂರ 14: ಆದರ್ಶ ಶಿಕ್ಷಕ,ಶಿಕ್ಷಣ ಪ್ರೇಮಿ,ಸಮಾಜ ಸೇವಕ,ಹಿರಿಯ ಚೇತನ ಬಿ.ಸಿ.ಹಿರೇಮಠರವರ ಜನ್ಮ ಶತಮಾನೋತ್ಸವ ಸಮಾರಂಭವು ಅಂಬಡಗಟ್ಟಿಯ ಸತೀಶಣ್ಣ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಜರುಗಿತು. ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಬಿ.ಸಿ.ಹಿರೇಮಠರವರ ವ್ಯಕ್ತಿತ್ವ ಮತ್ತು ಅವರ ಸಮಾಜ ಸೇವೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸುತ್ತ, ಇಂದಿನ ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಬದಲಾವಣೆಯಲ್ಲಿ ಶತಾಯುಷಿಗಳಾಗುವವರು ವಿರಳ. ಅಂತಹದರಲ್ಲಿ ಹಿರೇಮಠ ಗುರುಗಳು ಸರಳ ಜೀವನ ನಡೆಸಿ ಶತಾಯುಷಿಗಳಾಗಿರುವದು ಹರ್ಷದ ಸಂಗತಿ. ಅವರು ಇನ್ನೂ ಹಲವಾರು ವರ್ಷಗಳವರೆಗೆ ಸುಖವಾಗಿ ಬಾಳಲಿ ಎಂದು ಶುಭ ಕೋರಿದರು.

  ಸಾನಿಧ್ಯವಹಿಸಿದ್ದ ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಬಿ.ಸಿ.ಹಿರೇಮಠರವರು ಆದರ್ಶ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ. ಆಧ್ಯಾತ್ಮ ಜೀವಿಗಳಾದ ಇವರು ಬೆಳಗಾವಿ ಹಾಗೂ ಕಿತ್ತೂರ ಕಲ್ಮಠಗಳ ಜೊತೆಗೆ ಅವಿನಾನುಭಾವ ಸಂಭಂಧ ಹೊಂದಿದವರಾಗಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವದರ ಜೊತೆಗೆ ಅವರಲ್ಲಿ ಸಂಸೃತಿ,ನೈತಿಕತೆ ಬೆಳೆಯಿಸಿ ಸಮಾಜಕ್ಕೆ ಮಾದರಿಯಾಗಿರುವದಕ್ಕೆ ಅವರಿಗೆ ಶುಭ ಕೋರಿದರು. ವೃದ್ಧಾಶ್ರಮಗಳ ಆಗಮನದ ಇಂದಿನ ದಿನಗಳಲ್ಲಿ ಹಿರೇಮಠರವರ ಮಕ್ಕಳು ಮತ್ತು ಅವರ ಸಂಭಂಧಿಕರು ಹಿರಿಯ ಜೀವಿಯನ್ನು ಆರೈಕೆ ಮಾಡುತ್ತಿರುವ ರೀತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

  ವೇದಿಕೆಯ ಮೇಲೆ ನಾಗನೂರು ರುದ್ರಾಕ್ಷಿ ಮಠದ ಅಲ್ಲಮ ಮಹಾಸ್ವಾಮಿಗಳು, ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚ್ಚಣಕಿಯ ಪಂಚಾಕ್ಷರಿ ಮಹಾಸ್ವಾಮಿಗಳು, ಅರಭಾವಿಯ ಸಿದ್ದಲಿಂಗ ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು, ಮುತ್ನಾಳದ ಶಿವಾನಂದ  ಮಹಾಸ್ವಾಮಿಗಳು ಮತ್ತು ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.

  ಎಲ್ಲ ಪೂಜ್ಯರು, ಹಿರೇಮಠ ಬಂಧುಗಳು, ಹಿರೇಮಠ ಅಭಿಮಾನಿಗಳು ಮತ್ತು ಸತೀಶಣ್ಣ ಕಲ್ಯಾಣ ಮಂಟಪದ ಮಾಲೀಕರಾದ ಹಬೀಬ ಶಿಲೇದಾರ ಶತಾಯುಷಿ ಬಿ.ಸಿ.ಹಿರೇಮಠ ಶಿಕ್ಷಕರನ್ನು ಗೌರವಿಸಿದರು. ಹಿರೇಮಠ ಶಿಕ್ಷಕರ ಜೇಷ್ಠ ಸುಪುತ್ರಿಯಾದ ಉಮಾದೇವಿ ವಿರುಪಾಕ್ಷಪ್ಪ ಪಾಟೀಲ ರವರು ಬರೆದ "ನೂರೊಂದರ ನನ್ನಪ್ಪನಿಗೆ ನುಡಿನಮನ" ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಮುತ್ತು ಕಲ್ಮಠ ವೇದ ಪಠಣ ಮಾಡಿದರು.  ಈಶ್ವರ ಗಡಿಬಿಡಿ ಪ್ರಾಥರ್ಿಸಿದರು. ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ದಳವಾಯಿ ಸ್ವಾಗತಿಸಿ ಹಿರೇಮಠ ಗುರುಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ನಿವೃತ್ತ ಅಧೀಕ್ಷಕ ಇಂಜನೀಯರರಾದ ಸಿ.ಬಿ.ಹಿರೇಮಠ ಎಲ್ಲ ಪೂಜ್ಯರನ್ನು ಗೌರವಿಸಿದರು. ವ್ಹಿ.ಆರ್.ಪಾಟೀಲ ವಂದಿಸಿದರು. ಶಿಕ್ಷಕರಾದ ಪ್ರಭು ಪಾಟೀಲ ನಿರೂಪಿಸಿದರು.