ತೊಟ್ಟಿಲು ಮನೆಗಳಲ್ಲಿ ಆಷಾಢ ಏಕಾದಶಿ ಸಂಭ್ರಮಾಚರಣೆ

ತೊಟ್ಟಿಲು ಮನೆಗಳಲ್ಲಿ ಆಷಾಢ ಏಕಾದಶಿ ಸಂಭ್ರಮಾಚರಣೆ  Celebrations of Ashadha Ekadashi at crèches

ಲೋಕದರ್ಶನ ವರದಿ

ಬೆಳಗಾವಿ 25: ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ವತಿಯಿಂದ ನಡೆಸಲಾಗುತ್ತಿರುವ ತೊಟ್ಟಿಲು ಮನೆ ಕೇಂದ್ರಗಳಲ್ಲಿ ಆಷಾಢ ಏಕಾದಶಿಯನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗವಹಿಸಿ, ಭಜನೆ, ದೇವರ ನಾಮಸ್ಮರಣೆ, ಕಥೆ ಹೇಳುವಿಕೆ, ಚಿತ್ರರಚನೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಶಿಕ್ಷಕಿಯರು ಮಕ್ಕಳಿಗೆ ಆಷಾಢ ಏಕಾದಶಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವವನ್ನು ಸರಳವಾಗಿ ವಿವರಿಸಿ, ನಮ್ಮ ಸಂಪ್ರದಾಯಗಳನ್ನು ಗೌರವಿಸುವುದು ಮತ್ತು ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.  

ಈ ಸಂದರ್ಭದಲ್ಲಿ ಮಕ್ಕಳಲ್ಲಿ ಭಕ್ತಿ, ಶಿಸ್ತು, ಸಹಕಾರ, ಸಂಸ್ಕೃತಿ ಪ್ರೇಮ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಮೌಲ್ಯಾಧಾರಿತ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಮಕ್ಕಳು ಸಂತೋಷದಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಕೇಂದ್ರಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು    ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವೈಜಯಂತಿ ಎಂ ಚೌಗಲಾ ಮಾತನಾಡಿ ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು. ಶಿಕ್ಷಕಿಯರು ಹಾಗೂ ಸಿಬ್ಬಂದಿ ಕಾರ್ಯಕ್ರಮವನ್ನು   ಯಶಸ್ವಿಯಾಗಿ ಆಯೋಜಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಶಾಹಿನಬಾನು ಹೊಂಬಳ ತೊಟ್ಟಿಲುಮನೆಯ ಶಿಕ್ಷಕಿಯರಾದ ವೀಣಾ ಅಮಾಸಿ,ಬಸಕ್ಕಾ ಕೋಳಿ, ಪದ್ಮಾ ವಾಳವೇಕರ ಹಾಗೂ ಸವಿತಾ ಬಿರ್ಜೇ  ಉಪಸ್ಥಿತರಿದ್ದರು.