ವಿಜಯಪುರ 13: ಹಾಲುಮತ ಧರ್ಮದ ಐತಿಹಾಸಿಕ ಮೂಲ ಪುರುಷ ಶ್ರೀ ರೇವಣಸಿದ್ಧೇಶ್ವರ ಜಯಂತಿಯನ್ನು ಆಚರಣೆ ಮಾಡಿ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಜಾತಿ ರಹಿತ, ಧರ್ಮ ರಹಿತ, ಸಮ ಸಮಾಜ ದೇಶ ನಿರ್ಮಾಣ ವೇದಿಕೆ ರಾಷ್ಟ್ರೀಯ ಆದಿ ಜಗದ್ಗುರು ರೇವಣಸಿದ್ದೇಶ್ವರ ಸಂಘಟನೆ ರಾಜ್ಯಾಧ್ಯಕ್ಷರು, ಮನಗೂಳಿ ಜಗದ್ಗುರು ಪೀಠಾಧಿಪತಿಗಳಾದ ಶ್ರೀ ಶರಭಯ್ಯ ಮಹಾಸ್ವಾಮಿಗಳು ಹೇಳಿದರು.
ಮನಗೂಳಿ ಪಟ್ಟಣದ ಆದಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು, ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರು ಹಾಲುಮತ ಸಮಾಜದ ಮೂಲ ಗುರುಗಳು ಇವರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಸಿದ್ಧಶಿವಯೋಗಿ ಶಾಂತಿಮಯ್ಯ ದೇವಂಗಳ ಪುತ್ರರಾಗಿ ಮಹಾದೇವಿ ಗರ್ಭ ಸಂಜಾತರಾಗಿ ಪಾಲ್ಗುಘ ಶುದ್ಧ ತ್ರಯೋದಶಿಯಂದು ಸರೂರಿನಲ್ಲಿ ರೇವಣಸಿದ್ದೇಶ್ವರರು ಲೋಕಲ್ಯಾಣಕ್ಕಾಗಿ ಜನ್ಮ ತಾಳಿದರು ಎಂದರು.
ಮುದ್ದೇಬಿಹಾಳ ತಾಲೂಕಿನ ಸರೂರು ಶ್ರೀ ರೇವಣಸಿದ್ದೇಶ್ವರರರ ಜನ್ಮಭೂಮಿಯಾಗಿದೆ, ಆದರೆ ಸೋಮೇಶ್ವರರು ಇವರು ಕರ್ಮಭೂಮಿಯನ್ನಾಗಿ ಈಗಿನ ತೆಲಗಾಂಣದ ಕೊಲ್ಲಿಪಾಕಿ ಮಾಡಿಕೊಂಡು ಆಧಾತ್ಮಿಕ ಲೋಕಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟವರು. ಬಡ ಜನರ ಉದ್ಧಾರ, ರೈತ ಸಮುದಾಯಗಳ ಬಗ್ಗೆ ಅವರಿಗಿದ್ದ ದೂರ ದೃಷ್ಟಿ ಸಾಮಾಜಿಕ ಕಳಕಳಿಯನ್ನು ನಾವು ಎಂದಿಗೂ ಮರೆಯಲಾಗದು. ಶ್ರೀ ರೇವಣಸಿದ್ಧೇಶ್ವರರು ಹಾಲುಮತ ಸಮಾಜದ ಅತ್ಯಂತ ಪ್ರಾಚೀನ ಗುರುವರ್ಯರಾಗಿದ್ದಾರೆ. ಇಂದಿನ ಸಮಾಜದಲ್ಲಿ ಕೆಲವರು ಕಾಲ್ಪನಿಕ ಕಪೋಕಲ್ಪಿತ ರೇಣುಕಾಚಾರ್ಯರ ಹೆಸರಿನಲ್ಲಿ ಆದಿ ಜಗದ್ಗುರು ರೇವಣಸಿದ್ಧೇಶ್ವರರ ಪರಂಪರೆಯನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು ಇದು ನಮ್ಮ ಗುರು ಪರಂಪರೆಗೆ ಕಪ್ಪುಚುಕ್ಕೆಯಾಗಿದೆ.
ಇದರ ಇತಿಹಾಸ ಮತ್ತು ಪರಂಪರ ಅಪೂರ್ವ ಅಮೋಘ. ಸೃಷ್ಟಿ ಸೌಂದರ್ಯದ ಮಡಿಲು, ಕೃಷ್ಣಾ ನದಿಯ ತಟದ ಶಾಂತಿಮಯ ತಪೋಭೂಮಿ ಸರೂರಿನಲ್ಲಿ ಶ್ರೀ ಜಗದ್ಗುರು ಸರೂರು ಶಾಂತ ಸಿಂಹಾಸನ ಮಹಾ ಸಂಸ್ಥಾನ ಪೀಠವು ಆದರ್ಶ ಪರಂಪರೆಗೆ ಜಗದ್ಗುರುಗಳನ್ನು ಕೊಟ್ಟ ಕೀರ್ತಿ ಇದರದ್ದಾಗಿದೆ. ಜಗದ್ಗುರು ಶ್ರೀ ರೇವಣಸಿದ್ಧೇಶ್ವರರು ಹುಟ್ಟಿ ಹಾಲುಮತ ಧರ್ಮ ಸಂಸ್ಕೃತಿಯನ್ನು ಸ್ಥಾಪಿಸಿ ಬೆಳೆಸಿ ಉಳಿಸಿದ್ದನ್ನು ಎಂದು ಮರೆಯಲಾಗದ್ದು. ಶ್ರೀ ರೇವಣಸಿದ್ಧೇಶ್ವರರು ಸಾಮಾನ್ಯರಲ್ಲ. ಅಸಮಾನ್ಯ ಘನ ವ್ಯಕ್ತಿತ್ವ ಹೊಂದಿದ ಸಕಲ ಸಮುದಾಯದ ಹಿತವನ್ನು ಬಯಸಿದವರು. ಅಲ್ಲದೆ ಜನ ಸಮುದಾಯಗಳಲ್ಲಿ ಧಾರ್ಮಿಕ ಸಾಮಾಜಿಕ ಸತ್‌ಕ್ರಾಂತಿಗೈದ ಜಗದ್ಗುರುಗಳು. ಕೊನಲುಪಾಕ ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ 18 ಜಾತಿ ಜನಾಂಗಗಳ ಧಾರ್ಮಿಕ ಕೇಂದ್ರಗಳನ್ನು ಹುಟ್ಟು ಹಾಕಿ ಸಂಸ್ಕಾರ ಮತ್ತು ಸಂಸ್ಕೃತಿ ಅರುಹಿದ ಯುಗ ಪುರುಷರು. ನಮ್ಮ ಸಂಸ್ಕೃತಿಕ ಸಂಪ್ರದಾಯ ವೈಶಿಷ್ಟ್ಯತೆಗಳು ಹಾಲುಮತದವರ ನ್ಯಾಯ ತತ್ವ ಸಿದ್ಧಾಂತಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿಯನ್ನು ಮರೆಯಬಾರದು. ಮೂಲ ಸಂಸ್ಕೃತಿ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ ಹಾಲು ಮತ ಧರ್ಮದ ವೃಕ್ಷದ ತಾಯಿಬೇರು ಆದಿ ಜಗದ್ಗುರು ರೇವಣಸಿದ್ಧೇಶ್ವರರು. ನೊಂದವರ ಬೆಂದವರ ಬಾಳಿಗೆ ಬೆಳಕು ತೋರಿದವರು ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆ ಮಾತಿಗಿಂತ ಕೃತಿ ಬೋಧನೆಗಿಂತ ಸಾಧನೆ ದಾನಕ್ಕಿಂತ ದಾಸೋಹ ಚರಿತ್ರೆಗಿಂತ ಚಾರಿತ್ರೆ ಬಹುದೊಡ್ಡ ಆಸ್ತಿ ಎಂದು ಅರುಹಿ ಸಕಲ ಸಮುದಾಯದ ಉನ್ನತಿಗಾಗಿ ಸದಾ ಶ್ರಮಿಸಿದ ಕೀರ್ತಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರರಿಗೆ ಸಲ್ಲುತ್ತದೆ.
ಸಿದ್ಧ ಶಿವಯೋಗಿ ಶಾಂತಿಮಯ ಮುತ್ತಯ್ಯ ದೇವಂಗಳ ಪುತ್ರ. ಮಾದೇವಿ ಗರ್ಭ ಸಂಜಾತರಾಗಿ ಸರೂರಿನಲ್ಲಿ ಫಾಲ್ಗುಣ ಶುದ್ಧ ತ್ರಯೋದಶಿಯಂದು ಜನ್ಮ ತಾಳಿ ಸಾಧನಶೀಲ ಸಮಾಜ ಕಟ್ಟಿ ಬೆಳೆಸಲು ಅವರು ತೋರಿದ ದಾರಿ ಶ್ರೇಷ್ಠವಾಗಿದೆ. ಜಗದ್ಗುರು ರೇವಣಸಿದ್ಧರು ನಿರೂಪಿಸಿದ, ಭೋದಿಸಿದ ಆದರ್ಶ, ವಿಚಾರ ಧಾರೆಗಳು ಸರ್ವ ದರ್ಶನಿಯವಾಗಿವೆ. ಹಾಲುಮತ ಧರ್ಮದ ತತ್ವಗಳನ್ನು ಪ್ರತಿಪಾದಿಸುವ ಸಂದರ್ಭದಲ್ಲಿ ಸರ್ವರ ಅಭ್ಯುದಯದ ಜೊತೆಗೆ ಸಾಮಾಜಿಕ ಕಳಕಳಿ ಹಾಗೂ ಸಂಘಟನಾತ್ಮಕ ಅಂಶಗಳನ್ನು ಕಾಣಬಹುದಾಗಿದೆ. ಜಗದ್ಗುರು ರೇವಣಸಿದ್ಧೇಶ್ವರರು ಬೋಧಿಸಿದ ತತ್ವ ಸಿದ್ಧಾಂತ ಅಹಿಂಸಾ ಸತ್ಯ ಮಸ್ತೆಯಂ ಬ್ರಹ್ಮಚಾರ್ಯ ದಯಾ ಕ್ಷಮಾ ದಾನಂ ಪೂಜಾ ಜಪೋ ಧ್ಯಾನ ಮಿತಿ ಧರ್ಮಷ್ಯ ಸಂಗ್ರಹಃ ಅಹಿಂಸೆ ಸತ್ಯ ಬ್ರಹ್ಮಚಾರ್ಯ ಅಸ್ತೆಯ ಬ್ರಹ್ಮ ಚಾರ್ಯ ದಯಾ, ಕ್ಷಮಾ, ದಾನ, ಜಪ, ಮತ್ತು ಧ್ಯಾನವೆಂಬ 10 ಮಾರ್ಗಗಳು ಧರ್ಮಸಂಪಾದನೆಗೆ ಮೂಲಗಳಾಗಿರುತ್ತವೆ ಎಂಬುದು ಶ್ರೀ ರೇವಣಸಿದ್ದೇಶ್ವರರ ಆಶಯವಾಗಿತ್ತು ಎಂದರು.
ಈ ಸಂದರ್ಭದಲ್ಲಿ ಅಡವಯ್ಯ ಸರೂರುಮಠ ಮನಗೂಳಿ ಶ್ರೀಗಳು ಹಾಗೂ ರೇವಣಸಿದ್ಧ ಮಣೂರ, ಮಾಂತೇಶ ಅಂಬಳನೂರ, ಬಾಬು ಯರನಾಳ, ಮಾಳು ನಾಗರಾಳ, ಮನಗೂಳಿ ಯುವಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.