ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ Celebration of the Jayanti of Shivasharana Nijasukhi Hadapada Appanna

ಸವದತ್ತಿ 30 : ತಾಲೂಕಾ ಆಡಳಿತ ವತಿಯಿಂದ ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ 12ನೇ ಶತಮಾನದ ವಚನ ಚಳುವಳಿಯ ಪ್ರಮುಖ ಶರಣರು, ಬಸವಣ್ಣನವರ ಬಲಗೈ ಬಂಟ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತಿಯನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಅವರು, ಹಡಪದ ಅಪ್ಪಣ್ಣನವರು ಸಮಾಜದಲ್ಲಿ ಸಮಾನತೆ ಸಾರಲು ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು. ಶರಣರ ತತ್ವಗಳು ಇಂದಿನ ಯುವ ಪೀಳಿಗೆಗೆ ದಾರೀದೀಪವಾಗಬೇಕು ಮತ್ತು ಪ್ರತಿಯೊಬ್ಬರೂ ಶರಣರ ಮಾರ್ಗದಲ್ಲಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಹಡಪದ ಅಪ್ಪಣ್ಣನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತರಲ್ಲ, ಅವರು ಸಮಸ್ತ ಮಾನವಕುಲಕ್ಕೆ ಮಾರ್ಗದರ್ಶಕರು. ಬಸವಾದಿ ಶರಣರ ಜೊತೆಗೂಡಿ ಸಮಸಮಾಜ ನಿರ್ಮಾಣದಲ್ಲಿ ಅವರು ನೀಡಿದ ಕೊಡುಗೆ ಅಪಾರವಾದುದು.

ಶರಣರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.  ಕಾರ್ಯಕ್ರಮದ ಆರಂಭದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ​‍್ಿಸಿದರು.

ಗ್ರೇಡ್ -2  ತಹಶೀಲ್ದಾರ ಎಮ್‌.ಎನ್‌.ಮಠದ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಬಿ.ಎನ್‌.ಪ್ರಭುನವರ, ಗೀರೀಶ್ ಮುನವಳ್ಳಿ,  ಅಮೀರ್ ಗೋರಿನಾಯ್ಕ್‌, ಗ್ಯಾರಂಟಿ ಸಮಿತಿಯ ಅಧ್ಯಕ್ಷ  ಶಿವಕುಮಾರ್ ರಾಠೋಡ್, ಸಂತೋಷ ನೊರೆಯವರ,  ಸುರೇಶ ತುಪ್ಪದ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಹಡಪದ ಸಮಾಜದ ಮುಖಂಡರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದು, ಶರಣರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.