ಸಂಭ್ರಮದ ಸಿದ್ದನಕೊಳ್ಳದ ಸಿದ್ದೇಶ್ವರ ಸ್ವಾಮೀಜಿ ರಥೋತ್ಸವ

ವೀರೇಶ ಕುರ್ತಕೋಟಿ

ಹುನಗುಂದ16:  ತಾಲೂಕಿನ ಸಮೀಪದ ಸುಕ್ಷೇತ್ರ ಸಿದ್ದನಕೊಳ್ಳದ ಸಿದ್ದೇಶ್ವರ ಸ್ವಾಮೀಜಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಭಕ್ತಿ,ಭಾವದ ನಡುವೆ ಸಡಗರ-ಸಂಭ್ರಮದಿಂದ ಜರುಗಿತು.ಹೆಲಿಕಾಪ್ಟರ್ ಮೂಲಕ ಸಿದ್ದನಕೊಳ್ಳದ ಭಕ್ತಾದಿಗಳಿಂದ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ರಥೋತ್ಸವಕ್ಕೂ ಮುನ್ನ ಬೆಳಿಗ್ಗೆ ಸಪ್ತ ಮಾತೃಗಳಾದ ಬ್ರಾಹ್ಮಿ, ಮಹೇಶ್ವರಿ, ಕೌಮುರಿ, ವೈಷ್ಣವಿ, ವರಾಹಿ, ಇಂದ್ರಾಣಿ ಹಾಗೂ ಚಾಮುಂಡಿ ಮೂರ್ತಿಗಳಿಗೆ ರುದ್ರಾಭಿಷೇಕ, ಹೋಮ, ಹವನ ಹಾಗೂ ವಿಶೇಷ ಅಲಂಕಾರ ಸಹಿತ ವಿಧಿ ವಿಧಾನಗಳು ಜರಗಿ ಮಧ್ಯಾಹ್ನ ಭಕ್ತಾದಿಗಳಿಗೆ ದಾಸೋಹ ನಡೆಯಿತು.

ಸಂಭ್ರಮದ ರಥೋತ್ಸವ: ಹಿಂದೂ ಮುಸ್ಲಿಂ ಏಕತೆಯ ಕೇಂದ್ರವಾಗಿರುವ ಸುಕ್ಷೇತ್ರ  ಸಿದ್ದನಕೊಳ್ಳದ ಸಿದ್ದೇಶ್ವರ ರಥೋತ್ಸವಕ್ಕೆ ತುಗ್ಗಲಡೋಣಿ ಗ್ರಾಮದವರಿಂದ ಹಗ್ಗದ ಸೇವೆ, ಕೆಲೂರ ಗ್ರಾಮದವರಿಂದ ನಂದಿಕೋಲು ಸೇವೆ, ಚಿಮ್ಮಲಗಿ ಗ್ರಾಮದವರಿಂದ ತೇರಿನ ಶೃಂಗಾರ ಸೇವೆ, ಹೂನೂರು ಗ್ರಾಮದವರಿಂದ ಪುರುವಂತಿಕೆ ಸೇವೆ, ಸಿದ್ದನಕೋಳ್ಳ ಹಾಗೂ ಬೆನಕನವಾರಿ ಗ್ರಾಮದ ಯುವಕರಿಂದ ಸಿಡಿಮದ್ದು ಸೇವೆ ನಡೆಯಿತು.

ಸಂಜೆ ಮಠದ ಆವರಣದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಕುಣಿಬೆಂಚಿ, ಚಿಲ್ಲಾಪೂರ,ಐಹೋಳೆ, ಗುಡೂರ, ಇಳಕಲ್, ಹುನಗುಂದ, ಜಕ್ಕಲಿ, ನಿಡಗುಂದಿ, ಬೂದಿಹಾಳ, ಅಮೀನಗಡ, ಸೂಳೇಬಾವಿ, ನರೇಗಲ್ಲ, ಮದ್ಲಾಪೂರ, ಕೆಲೂರ ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯದ ಇನ್ನಿತರ ಅನೇಕ ಭಾಗದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ದರ್ಶನ ಪಡೆದರು. 

ರಥೋತ್ಸವ ಮುಂದೆ ಸಾಗುತ್ತಿದ್ದಂತೆ ರಸ್ತೆಯ ಪಕ್ಕದ ನಿಂತಿದ್ದ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಭಕ್ತಿ ಸಮರ್ಪಸಿದರು. ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿದ್ದನಕೊಳ್ಳದ ಧಮರ್ಾಧಿಕಾರಿ ಡಾ||ಶಿವಕುಮಾರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ಜರುಗಿತು.ಜಾತ್ರೆಯ ನಿಮಿತ್ತ ಮಠದ ಆವರಣದಲ್ಲಿ ತುಂಬ ಹಬ್ಬದ ವಾತವರಣ ಸೃಷ್ಟಿಯಾಗಿತ್ತು.