ರಂಜಾನ್ ಹಬ್ಬವನ್ನು ಮನೆಯಲ್ಲೇ ಆಚರಿಸಿ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು, ಮೇ 21,ಕೊವಿಡ್-19  ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಈ  ಬಾರಿ  ಮನೆಯಲ್ಲಿದ್ದುಕೊಂಡೆ ಆಚರಿಸುವುದು ಅನಿವಾರ್ಯವಾಗಿದೆ. ಪ್ರಾರ್ಥನೆ, ಉಪವಾಸ,  ಇಫ್ತಾರ್‌ಗಳನ್ನು ಮನೆಯಲ್ಲೇ ಆಚರಿಸಿ ಹಾಗೂ ಇಡೀ ದೇಶ ಈ ಕೊರೊನಾ ಸಂಕಷ್ಟದಿಂದ ಪಾರಾಗಲು  ಭಗವಂತನಲ್ಲಿ ಪ್ರಾರ್ಥಿಸಿ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಮನವಿ ಮಾಡಿದ್ದಾರೆ.
 ಪವಿತ್ರ ರಂಜಾನ್  ತಿಂಗಳಲ್ಲಿ ಉಪವಾಸ ಮಾಡುವುದು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ.  ವಿಶ್ವದಾದ್ಯಂತ ಮುಸ್ಲಿಮರು ಬಾಂಧವರಿಗೆ ರಂಜಾನ್ ಅತ್ಯಂತ ಆಶೀರ್ವದಿತ ಹಾಗೂ ದೇವರು  ಕೃಪೆ ಮಾಡುವ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಸದ್ಯ  ಕೊವಿಡ್ -19 ಸೊಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಧಾರ್ಮಿಕ ಸ್ಥಳಗಳು,  ಪೂಜಾ  ಸ್ಥಳಗಳನ್ನು ಮುಚ್ಚಲಾಗಿದೆ. ಅಲ್ಲದೇ ಸೊಂಕು ತಡೆಗಟ್ಟುವ ಕಾರಣದಿಂದಾಗಿ ಧಾರ್ಮಿಕ ಸಭೆ,  ಸಮಾರಂಭ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
 ಕೇಂದ್ರ  ಸರ್ಕಾರದ ವಕ್ಫ್ ಕೌನ್ಸಿಲ್, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ನೀಡಿರುವ ನಿರ್ದೇಶನದ  ಪ್ರಕಾರ ರಂಜಾನ್ ತಿಂಗಳಲ್ಲಿ ಸಾಮೂಹಿಕವಾಗಿ ಸಭೆ ಸೇರುವುದು ಪ್ರಾರ್ಥನೆ / ಮಜ್ಲಿಸ್,  ಮಸೀದಿಯಲ್ಲಿ ಇಫ್ತಾರ್ ಸೇರುವುದನ್ನು ನಿಷೇಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ  ,ಕರ್ನಾಟಕ  ರಾಜ್ಯ ವಕ್ಫ್ ಮಂಡಳಿಯಿಂದ ಸಹ ಆದೇಶ ಹೊರಡಿಸಿದೆ. ಶುಕ್ರವಾರದ  ನಮಾಜ್ ಯಾವುದೇ ಕಾರಣಕ್ಕೂ ಮಸೀದಿಗೆ ತೆರಳಿ ಸಾಮೂಹಿಕವಾಗಿ ಸೇರಿ ಮಾಡಬಾರದು.  ಮಸೀದಿಯಲ್ಲಿರುವ ಪೇಶ್ ಇಮಾಮ್ಸ್, ಮೌಜನ್ಸ್ ಹಾಗೂ ಸಿಬ್ಬಂದಿಗಳು ಮಾತ್ರ ಸಾಮಾಜಿಕ ಅಂತರ  ಕಾಯ್ದುಕೊಂಡು ಪ್ರಾರ್ಥನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.ರಾಜ್ಯದ  ಎಲ್ಲ ಮಸೀದಿಗಳಲ್ಲಿ  ರಂಜಾನ್ ಗೆ ಸಂಬಂಧಪಟ್ಟ ಪ್ರಾರ್ಥನೆ, ಸಹ್ರಿ, ಉಪವಾಸ ಹಾಗೂ  ಇಫ್ತಾರ್ ಎಲ್ಲವನ್ನು ಮನೆಯಲ್ಲೇ ಆಚರಿಸಲು ತಿಳಿಸಲಾಗಿದೆ. ಕೊರೊನಾ ಸೊಂಕು ಹರಡುವುದನ್ನು  ತಡೆಗಟ್ಟುವ ಹಿನ್ನೆಲೆಯಲ್ಲಿ ಹಸ್ತ ಲಾಘವ , ತಬ್ಬಿಕೊಂಡು ಶುಭ ಕೊರುವುದನ್ನು ಮಾಡಬಾರದು ಎಂದು ಅವರು ಸೂಚಿಸಿದ್ದಾರೆ.