ವಿಜಯಪುರ,
ಡಿ28,ಬೇಸಿಗೆ ಸಮೀಪಿಸುತ್ತಿದ್ದು, ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ
ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅದಿಕಾರಿಗಳಿಗೆ ಸೂಚಿಸಿದ್ದಾರೆ.
ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ(ಆಲಮಟ್ಟಿ) ಅಣೆಕಟ್ಟಿಗೆ ಶನಿವಾರ ಬೆಳಿಗ್ಗೆ ಭೇಟಿ
ನೀಡಿದ ಅವರು, ನೀರಿನ ಮಟ್ಟವನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ
ಆಲಮಟ್ಟಿ ಅಣೆಕಟ್ಟೆಯಲ್ಲಿ 107ಟಿಎಂಸಿ ಹಾಗೂ ನಾರಾಯಣ ಪುರ ಜಲಾಶಯದಲ್ಲಿ 30 ಟಿಎಂಸಿ ನೀರು ಸಂಗ್ರಹವಾಗಿದೆ.
ಈ ನೀರನ್ನು ಸಮರ್ಪಕವಾಗಿ ಬಳಸುವಂತೆ ಸೂಚಿಸಿದರು. ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಿದಂತೆ
ವಾರ ಬಂದಿಯಂತೆ ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ಉದ್ದೇಶಕ್ಕೆ ನೀರು ಬಿಡುಗಡೆ ಮಾಡಬೇಕು. ನೀರು
ಪೋಲಾಗಬಾರದು ಮತ್ತು ದುರುಪಯೋಗ ವಾಗದಂತೆ ಎಚ್ಚರಿಕೆ
ವಹಿಸಬೇಕು. ಈಗಿನಿಂದಲೇ ಎಚ್ಚರಿಕೆ ವಹಿಸಿದರೆ ಬೇಸಿಗೆಯಲ್ಲಿ ನೀರಿನ ಅಭಾವವನ್ನು ನಿಭಾಯಿಸಬಹುದು.
ಈ ನಿಟ್ಟಿನಲ್ಲಿ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಕೆಬಿಜೆಎನ್ ಎಲ್ ಅಣೆಕಟ್ಟು ವಲಯದ ಮುಖ್ಯ ಅಭಿಯಂತರು
ಆರ್. ಪಿ. ಕುಲಕರ್ಣಿ ಮತ್ತು ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.