ಬೆಟಗೇರಿ 26: ಕಂಕಣ ಸೂರ್ಯಗ್ರಹಣ ಗುರುವಾರ ಡಿ.26 ರಂದು ಸಂಭವಿಸಿದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈರಣ್ಣ ಭೀಮಶೆಪ್ಪ ಕಂಬಾರ ಇವರ ಮನೆ ಅಂಗಳದಲ್ಲಿ ಬಾರಿ ಕಟ್ಟಿಗೆ ತುಂಡಿನಿಂದ ತಯಾರಿಸಿದ ಹಳೆಯ ಒನಕಿ ನಿಲ್ಲಿಸಿ ಸೂರ್ಯಗ್ರಹಣದ ವೇದ, ಸ್ಪರ್ಶ, ಮೋಕ್ಷ ಕಾಲಗಳನ್ನು ಸ್ಥಳೀಯರು ವೀಕ್ಷೀಸಿದರು.
ಅಗಲವಾದ ತಟ್ಟೆ ಆಕಾರದ ಪರಾತನಲ್ಲಿ ನೀರು ಹಾಕಿ ಒನಕಿ ಇಟ್ಟದ್ದು, ಗ್ರಹಣ ಮೋಕ್ಷಕಾಲದವರೆಗೆ ಯಾವುದೇ ಆಧಾರವಿಲ್ಲದೇ ನಿಂತುಕೊಂಡು ವಿಸ್ಮಯ ಮೂಡಿಸಿತು. ಒನಕಿ ನಿಂತುಕೊಂಡದ್ದನ್ನು ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು. ಸೂರ್ಯಗ್ರಹಣದ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಿದ್ದರಿಂದ, ಜನಜಂಗುಳಿ ಓಡಾಟ ಇಲ್ಲದ ಕಾರಣ ಗ್ರಾಮದ ಪ್ರಮುಖ ಸ್ಥಳ, ಬೀದಿಗಳು ಬಿಕೋ ಎನ್ನುತ್ತಿದ್ದವು. ಗ್ರಹಣ ಮೋಕ್ಷಕಾಲದ ಬಳಿಕ ಎಂದಿನಂತೆ ಅಂಗಡಿ ಮುಂಗಟ್ಟುಗಳು ಆರಂಭವಾದವು.
ಕಂಕಣ ಸೂರ್ಯಗ್ರಹಣ ಸ್ಪರ್ಶದ ಕ್ಷಣಗಣನೆ ಆರಂಭವಾಗುವುದಕ್ಕೆ ಮುಂಚೆ ಪರಾತನಲ್ಲಿ ಒನಕಿ ಇಡಲು ಪ್ರಯತ್ನಿಸಿದರೂ ಒನಕಿ ನಿಂತುಕೊಳ್ಳಲಿಲ್ಲ, ಮುಂಜಾನೆ 8 ಗಂಟೆ 10 ನಿಮಿಷಕ್ಕೆ ಗ್ರಹಣ ಹಿಡಿದ ಬಳಿಕ ಒನಕಿ ಯಾವುದೇ ಆಧಾರವಿಲ್ಲದೇ ನಿಂತುಕೊಂಡಿತು. ಗ್ರಹಣದ ಬಿಡುವ ಕಾಲಕ್ಕೆ 11 ಗಂಟೆ 11 ನಿಮಿಷಕ್ಕೆ ತಾನಾಗಿಯೇ ನೆಲಕ್ಕೆ ಉರುಳಿತು ಎಂದು ಈರಣ್ಣ ಕಂಬಾರ ತಿಳಿಸಿದರು. ಹಳೆಯ ಕಾಲದಿಂದ ನಮ್ಮ ಪೂರ್ವಜರು ತಟ್ಟೆ ಅಥವಾ ಪರಾತನಲ್ಲಿ ಒನಕಿ ನಿಲ್ಲಿಸಿ, ಗ್ರಹಣ ಹಿಡಿದ ವೇದ, ಸ್ಪರ್ಶ, ಮೋಕ್ಷ ಕಾಲಗಳ ಕುರಿತು ತಿಳಿದುಕೊಳ್ಳುವ ಪದ್ದತಿ ಇತ್ತು, ಈಗಲೂ ಈ ಹಳೆಯ ಪದ್ಧತಿ ಅನುಸರಿಸಿದ್ದು ಇಂದಿನ ಯುವ ಪೀಳಿಗೆಗೆ ಪೂರ್ವಜರು ಅನುಸರಿಸುತ್ತಿದ್ದ ಕ್ರಮವನ್ನು ತಿಳಿಸಿಕೊಟ್ಟಂತಾಗಿದೆ ಎಂದು ಸ್ಥಳೀಯ ವೇದಮೂತರ್ಿ ಈರಯ್ಯ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈರಣ್ಣ ಕಂಬಾರ ಅಂಗಳದಲ್ಲಿ ಒನಕಿ ನಿಲ್ಲಿಸಿದ ಸುದ್ಧಿ ಹರಡುತ್ತಿದ್ದಂತೆ ಗ್ರಾಮದ ಹಲವಡೆ ಒನಕಿ ನಿಲ್ಲಿಸಿ, ಕಂಕಣ ಸೂರ್ಯ ಗ್ರಹಣ ಹಿಡಿದ, ಬಿಟ್ಟ ಸಮಯವನ್ನು ಯುವಕರು ತಮ್ಮ ಮನೆ, ಓಣಿಗಳಲ್ಲಿ ಪರೀಕ್ಷಿಸಿದರು. ಈರಣ್ಣ ಕಂಬಾರ, ಕಾಳಪ್ಪ ಕಂಬಾರ, ಶಿವು ಕಂಬಾರ, ಮಹಾಂತೇಶ ಕಂಬಾರ, ಡಾ.ಮಲ್ಲಿಕಾಜರ್ುನ ಪಾಟೀಲ, ಡಾ.ಸಂಜೀವ ಹಂಜಿ, ಕರೆಪ್ಪ ಬಾಣಸಿ, ಅಜ್ಜಪ್ಪ ಕೂಟೂರ, ಶಿವಪುತ್ರ ಮುಧೋಳ, ಪ್ರಮೋದ ಮುಧೋಳ ಸೇರಿದಂತೆ ಮತ್ತಿತರರು ಇದ್ದರು.