ಎನ್‌ಪಿಆರ್ ಇಲ್ಲದೆ ಜಾತಿ ಗಣತಿ ಸಾಧ್ಯವಿಲ್ಲ- ವೆಂಕಯ್ಯ ನಾಯ್ಡು

ನವದೆಹಲಿ, ಫೆ 7: ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಇಲ್ಲದೆ ಜಾತಿ ಗಣತಿ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಶುಕ್ರವಾರ ಹೇಳಿದ್ದಾರೆ. 2021 ರಲ್ಲಿ ನಡೆಯುವ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಸರ್ಕಾರ ನಡೆಸಬೇಕು ಎಂದು ಸಂಯುಕ್ತ ಜನತಾ ದಳ (ಜೆಡಿಯು) ಸದಸ್ಯ ರಾಮನಾಥ್ ಠಾಕೂರ್ ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ಒತ್ತಾಯಿಸಿದಾಗ ವೆಂಕಯ್ಯನಾಯ್ಡು ಈ ಹೇಳಿಕೆ ನೀಡಿದ್ದಾರೆ. 

ಜಾತಿ ಗಣತಿಯನ್ನು ಕೊನೆಯದಾಗಿ 1931 ರಲ್ಲಿ ಬ್ರಿಟಿಷರ ಕಾಲದಲ್ಲಿ ನಡೆಸಲಾಗಿತ್ತು. ನಂತರ,2010 ರಲ್ಲಿ ಯುಪಿಎ ಸರ್ಕಾರ ಜಾತಿ ಗಣತಿಯನ್ನು ಆರಂಭಿಸಿತ್ತು. ಆದರೆ, ಇದನ್ನು ಕಾರಣಾಂತರಗಳಿಂದ ಪೂರ್ಣಗೊಳಿಸಲಾಗಲಿಲ್ಲ ಎಂದು ಠಾಕೂರ್ ಹೇಳಿದರು. ಜಾತಿ ಎಣಿಕೆ ಲಭ್ಯವಿಲ್ಲದ ಕಾರಣ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಅಭಿವೃದ್ಧಿ ಯೋಜನೆಗಳಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎಂದು ಠಾಕೂರ್ ಹೇಳಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಹಿಂದೆ ಹಲವು  ಬಾರಿ ಮನವಿ ಮಾಡಿದಂತೆ 2021 ರಲ್ಲಿ ನಡೆಯುವ ಉದ್ದೇಶಿತ ರಾಷ್ಟ್ರೀಯ ಜನಗಣತಿಯೊಂದಿಗೆ ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಬೇಕು ಎಂದು ಠಾಕೂರ್ ಒತ್ತಾಯಿಸಿದರು.