ಬೆಂಗಳೂರು, ಜೂ 30: ನಿರಂತರವಾಗಿ ಇಂಧನ ದರ ಏರಿಕೆ ವಿರುದ್ಧ ಸೈಕಲ್ ಜಾಥಾ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ನಾಯಕರ ಮೇಲೆ ರಾಜ್ಯ ಬಿಜೆಪಿ ಸರ್ಕಾರ ಮೊಕದ್ದಮೆ ದಾಖಲಿಸಿರುವುದನ್ನು ಸಂಸದ ಡಿ.ಕೆ. ಸುರೇಶ್ ಖಂಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಜನರಪರವಾಗಿ ಪ್ರತಿಭಟನೆ ಮಾಡಿದ್ದೇವೆ. ಬಿಜೆಪಿಯವರು ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದು ಗಮನಕ್ಕೆ ಬಂದಿದೆ. ಪೊಲೀಸರು ಕಾಂಗ್ರೆಸ್ ಮೇಲೆ ಮಾತ್ರ ಕೇಸ್ ದಾಖಲಿಸುತ್ತಾರೆಯೇ ವಿನಃ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕರ ಮೇಲೆ ಯಾವ ಕ್ರಮವನ್ನೂ ಸಹ ಕೈಗೊಳ್ಳುವುದಿಲ್ಲ ಎಂದರು.
ಜನಪರ ಹೋರಾಟ ನಡೆಸಿದರೆ ಪ್ರಕರಣ ದಾಖಲಿಸುತ್ತಾರೆ ಎಂದರೆ ಏನರ್ಥ?. ಆದರೂ ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಡಿ.ಕೆ. ಸುರೇಶ್ ಮಾರ್ಮಿಕವಾಗಿ ಹೇಳಿದರು.ಸಾರ್ವಜನಿಕರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿದ ಅವರು, ಜನಪರ ಧ್ವನಿಗೆ ಪ್ರಕರಣ ದಾಖಲಿಸುವುದು ಸರಿಯಲ್ಲ. ಜನರ ಬಗ್ಗೆ ಕಾಳಜಿ ತೋರದ ಬಿಜೆಪಿಯಲ್ಲಿ ಸಚಿವರು ಪರಸ್ಪರ ಆರೋಪ ಪ್ರತ್ಯಾರೋಪ ದಾಳಿ ನಡೆಸುವುದು, ಮಾಧ್ಯಮಗಳ ಮೂಲಕ ಕಿತ್ತಾಡುವುದೇ ಅವರ ಕೆಲಸವಾಗಿದೆ ಎಂದು ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.