ವೃತ್ತಿ ಆಯ್ಕೆಗೆ ಮಾರ್ಗದರ್ಶನ ಅಗತ್ಯ: ಮಹೇಶ

ಹಾವೇರಿ 28: ವೃತ್ತಿ ರಂಗದಲ್ಲಿ ಉದ್ಯೋಗವನ್ನು ಅರಸಿ ಹೋಗುವ ಯುವಕರಿಗೆ ಅಗತ್ಯ ಮಾರ್ಗದರ್ಶನ ಮತ್ತು ಕೌಶಲ್ಯ ತರಬೇತಿ ಅವಶ್ಯಕವಾಗಿದೆ ಎಂದು ಧಾರವಾಡ ಕನೆಕ್ಟ್ ಸಂಸ್ಥೆ ಸಂಸ್ಥಾಪಕ ಕಾರ್ಯಾಧ್ಯಕ್ಷ ಮಹೇಶ ಬಿ. ಮಾಶಾಳ ಹೇಳಿದರು. 

       ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಉದ್ಯೋಗಕೋಷ ವಿಭಾಗವು ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳು ವಿಷಯದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. 

      ಬ್ಯಾಂಕಿಂಗ್ ಕ್ಷೇತ್ರ ಇಂದು ಎಲ್ಲೆಡೆ ಅವ್ಯಾಹತವಾಗಿ ಬೆಳೆಯುತ್ತಿದ್ದು, ವಿಶ್ವದ ಎಲ್ಲ ರಾಷ್ಟ್ರಗಳ ವ್ಯವಹಾರವನ್ನು ನಿರ್ವಹಿಸುವುದರ ಜೊತೆಗೆ ಸಾರ್ವಜನಿಕವಾಗಿ ಉತ್ತಮ ಕಾರ್ಯ ನೀಡುತ್ತಿದೆ. ಇದರೊಟ್ಟಿಗೆ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗದ ಮಟ್ಟವೂ ಏರಿಕೆಯಾಗುತ್ತಿದೆ. ಕಲಿಕಾಸಕ್ತ ವಿದ್ಯಾರ್ಥಿಗಳು ಇಂತಹ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಬೇಕಾದರೆ ಉತ್ತಮ ನಿರ್ವಹಣಾ ಕೌಶಲ್ಯ, ಬೌದ್ಧಿಕಮಟ್ಟ, ಸಾಮಾನ್ಯ ಜ್ಞಾನವನ್ನು ಹೊಂದುವುದರ ಜೊತೆಗೆ ಗಣಕಜ್ಞಾನವನ್ನು ಹೊಂದಬೇಕಾದ ಅನಿವಾರ್ಯತೆ ಇದೆ. ಭವಿಷ್ಯತ್ತಿನ ದಿನಮಾನಗಳಲ್ಲಿ ಸಂಪೂರ್ಣ ಪ್ರಮಾಣದ ವೃತ್ತಿವಲಯ ಹುಟ್ಟಿಕೊಳ್ಳುವುದರ ಮೂಲಕ ಉದ್ಯೋಗ ಕ್ರಾಂತಿಯಾಗಲಿದೆ ಎಂದರು. ಪ್ರಸ್ತುತ ದಿನಮಾನಗಳಿಗೆ ಹೊಂದಿಕೊಳ್ಳುವಂತಹ ಜ್ಞಾನವನ್ನು ಪ್ರತಿಯೊಬ್ಬರೂ ಹೊಂದುವ ಅಗತ್ಯತೆ ಇದೆ ಎಂದರು. 

      ಕಾರ್ಯಕ್ರಮದಲ್ಲಿ ಕನೆಕ್ಟ್ ಸಂಸ್ಥೆಯ ನಿರ್ದೇಶಕ ಗಿರೀಶ ಅಂಗಡಿ ಹಾಗೂ ಸ್ಪಧರ್ಾತ್ಮಕ ಪರೀಕ್ಷಾ ತರಬೇತಿದಾರ ಸಂತೋಷ ಅಂಗಡಿ ವಿಶೇಷ ಉಪನ್ಯಾಸ ನೀಡಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ. ಡಿ. ಎ. ಕೊಲ್ಲಾಪುರೆ ಡಾ|| ಎಮ್. ಜಿ. ಯರನಾಳ, ಪ್ರೊ. ಆರ್. ಬಿ. ಅಜರಡ್ಡಿ, ಪ್ರೊ. ಪವನ ಡೊಂಕಣ್ಣವರ, ಉದ್ಯೋಗಾಧಿಕಾರಿ ಬಸಲಿಂಗಯ್ಯ ಹಿರೇಮಠ ಇದ್ದರು.