ಮೈಸೂರು, ಜೂನ್ 11, ಸರ್ಕಾರ ಕೇವಲ ಐದನೇ ತರಗತಿವರೆಗೆ ಮಾತ್ರ ಆನ್‌ಲೈನ್ ಶಿಕ್ಷಣ ರದ್ದು ಮಾಡದೇ ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದುಪಡಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ಟೋಬರ್ ವರೆಗೂ ಶಾಲೆಗಳನ್ನು ಆರಂಭಿಸಬಾರದು. ಪ್ರಾಥಮಿಕ ಶಾಲೆಗಳಲ್ಲಿ ಆನ್ ಲೈನ್ ಶಿಕ್ಷಣ ರದ್ದುಪಡಿಸಿರುವುದು ಸ್ವಾಗತಾರ್ಹ ಎಂದರು.ಶಾಲೆಗಳಲ್ಲಿ ಪಾಠ ಕಲಿಯುವುದೇ ಬೇರೆ, ಆನ್ ಲೈನ್ ಶಿಕ್ಷಣವೇ ಬೇರೆ. ಶಾಲೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಎಚ್ಚರಿಕೆಯ ತೀರ್ಮಾನ ಮಾಡಬೇಕಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಅಧ್ಯಯನ ಮಾಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ. ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಸಂಬಂಧ ಶಿಕ್ಷಣ ಸಚಿವರು ಅಗತ್ಯ ಕ್ರಮ ತೆಗೆದುಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೊರೆಯಾಗದಂತೆ ಅನುಕೂಲ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.