ಕಾಲುವೆ ದುರಸ್ತಿ ಕಾರ್ಯದ ನೆಪವೊಡ್ಡಿ ತೆರವು ಕಾರ್ಯ ಖಂಡನೀಯ: ಸನದಿ

ಲೋಕದರ್ಶನವರದಿ

ಮಹಾಲಿಂಗಪುರ ೧೧: ಸಮೀಪದ ಸಮೀರವಾಡಿಯ ಸೈದಾಪುರ ಶಾಖಾ ಕಾಲುವೆ ಹಾಗೂ ಢವಳೇಶ್ವರ ಮತ್ತು ಮುನ್ಯಾಳ ಹಂಚು ಕಾಲುವೆ ಪಕ್ಕದಲ್ಲಿರುವ ಮನೆಗಳನ್ನು ತೆರುವುಗೊಳಿಸಬೇಕೆಂದು  ಜಿ.ಎಲ್.ಬಿ.ಸಿ.ಅಧಿಕಾರಿಗಳು ಜನರನ್ನು ಒಕ್ಕಲೆಬಿಸುತ್ತಿರುವ ಕ್ರಮವನ್ನು ಸೈದಾಪೂರ ಗ್ರಾಮ ಪಂಚಾಯತ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಖಂಡಿಸಿದ್ದಾರೆ. 

          ತೆರವುಗೊಳಿಸಲು  7 ದಿನ ಗಡುವು ನೀಡಿ ತಪ್ಪಿದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿರುವ ಮಹಾಲಿಂಗಪುರ ಕನೀನಿನಿದ ಸಹಾಯಕ ಕಾರ್ಯ ನಿರ್ವಾಹಕ  ಅಧಿಕಾರಿ  ನೋಟೀಸ್ ಜಾರಿ ಮಾಡಿ ಪ್ರತಿಯೊಂದು ಮನೆಗೆ, ಅಂಗಡಿ, ಮುಂಗಟ್ಟುಗಳ ಮೇಲೆ ನೋಟಿಸ್ ಅಂಟಿಸಲಾಗಿದೆ. ಇದಕ್ಕೆ ವಿರೋಧವಾಗಿ ಸ್ಥಳೀಯ ಜನತೆ ರೊಚ್ಚಿಗೆದ್ದು ತಮ್ಮ ಅಂಗಡಿಗಳನ್ನು ಬಂದ ಮಾಡುವ ಮುಖಾಂತರ  ದಿಢೀರ್ ಮುಷ್ಕರ ಆರಂಭಿಸಿದರು.  

             ಮುಷ್ಕರಕ್ಕೆ ಬೆಂಬಲಿಸಿ ಸೈದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಲಿಂಗಪ್ಪ ಸನದಿಯವರು  ಮಾತನಾಡುತ್ತಾ 40-45 ವರ್ಷಗಳಿಂದ ನೂರಾರು ಕುಟುಂಬಗಳು ಕಾಲುವೆ ಪಕ್ಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ದಿಢೀರನೆ ಜಿಎಲ್ ಬಿಸಿಯವರು ಕಾಲುವೆ ದುರಸ್ತಿ ಕಾರ್ಯದ ನೆಪವೊಡ್ಡಿ ತೆರವುಗೊಳಿಸುತ್ತಿರುವುದು ಖಂಡನೀಯ. ಇಲ್ಲಿ ಬಡವರು, ಅನಾಥರು, ವೃದ್ಧರು, ವಿಧವೆಯರು, ಮಕ್ಕಳು ವಾಸಿಸುತ್ತಿದ್ದು ಏಕಾಏಕಿ ಈ ಕ್ರಮದಿಂದ ಬಡ ಕುಟುಂಬಗಳೆಲ್ಲಾ ಬೀದಿಗೆ ಬಿದ್ದಂತಾಗಿವೆ. ಅಧಿಕಾರಿಗಳು ಇವರ ಬಾಳಿನಲ್ಲಿ ಚೆಲ್ಲಾಟವಾಡುವುದನ್ನು ಬಿಟ್ಟು ಇವರ ಉಸುರಿಗೆ ಸೂರು ಇದ್ದಲ್ಲಿಯೆ ಬದುಕಲು ಬಿಡಿ ಎಂದರು.   

  ಇಲ್ಲಿನ ನಿವಾಸಿಗಳು ತ್ಯಾಜ್ಯ ಎಸೆಯುವುದರಿಂದ ತೊಂದರೆಯಾಗಿದೆ ಎಂದು ಸುತ್ತಲಿನ ರೈತರ ದೂರಿನ ಅನ್ವಯ ಈ ಕ್ರಮಕ್ಕೆ ಇಲಾಖೆ ಇಳಿದಿದೆ,ನಾವೇನೂ ರೈತರ ವಿರೋಧಿಗಳಲ್ಲ  ಇಲ್ಲಿನ ನಿವಾಸಿಗಳಿಗೆ ತ್ಯಾಜ್ಯ ಎಸೆಯದಂತೆ ತಿಳುವಳಿಕೆ ನೀಡಿ,  ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಕಾರಣ ಇಲ್ಲಿನ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾತ್ರ ಸ್ಥಗಿತಗೊಳಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.  

 ಗ್ರಾಮ ಪಂಚಾಯತಿ ಸದಸ್ಯೆ ಅನಸೂಯ ಪಾಟೀಲ, ರಾಜು ಮೂರುಚಿಟ್ಟಿ, ಯಮನಪ್ಪ ಉಪ್ಪಾರ, ರಾಜೆಶ್ರೀ ಮೇಲಪ್ಪಗೊಳ, ಸೈದಾಬಿ ಅರಬ್, ಸದಾಶಿವ ರಾಥೋಡ, ಪಡೆಪ್ಪ ಉಪ್ಪಾರ, ರುದ್ರಪ್ಪ ಮುಗಳಿ, ಮುಕುಂದ ಪವಾರ, ಶಿವಾನಂದ ಪತ್ತಾರ, ಮುತ್ತು ಕುಂಬಾರ, ಖಾಸಿಂ ತಟಗಾರ, ಮಾರುತಿ ತೇಲಿ,  ಪರಶುರಾಮ ಲಮಾಣಿ, ಸ್ಥಳೀಯ ಮಹಿಳಾ ಸಂಘ, ಮಾಧವಾನಂದ ಸಂಘಗಳು ಮುಷ್ಕರಕ್ಕೆ ಬೆಂಬಲಿಸಿದವು.