ಅಗಡಿಯಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ
ಕಾರವಾರ, ನ.8:- ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುನಗುಂದ ಮತ್ತು ಅಗಡಿ ಗ್ರಾಮದಲ್ಲಿ ಗುರುವಾರ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನ ಗುರುವಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎಂದು ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಗಾಗಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಸಲ್ಲಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲೂಕಿನ ಬಾಚಣಕಿ, ಚವಡಳ್ಳಿ, ಸಾಲಗಾಂವ, ಕಾತೂರು, ಇಂದೂರು ಸೇರಿದಂತೆ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರಿಗೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ, ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷದ ಕ್ರಿಯಾ ಯೋಜನೆ ತಯಾರಿಸಲು ಈಗಲೇ ಬೇಡಿಕೆ ಸಂಗ್ರಹಿಸಲಾಗುತ್ತಿದ್ದು, ಅಗತ್ಯವಿರುವವರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಪಡೆದ ಬೇಡಿಕೆಗಳನ್ನು ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು, 2025-26 ನೇ ಸಾಲಿನ ಸಮಗ್ರ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆದು, ಸಾರ್ವಜನಿಕರು ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸತೀಶ್ ಒಡೆಯರ್, ಬಿಎಫ್‌ಟಿ ಸಂತೋಷ ಹಿರೇಮಠ, ಲಕ್ಷ್ಮಣ ಲಮಾಣಿ ಸೇರಿದಂತೆ ಪಂಚಾಯತ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.