ಉದ್ಯೋಗ ಖಾತರಿ ನಡಿಗೆ ಸಬಲತೆಯೇಡೆಗೆ ಅಭಿಯಾನ
ಕಾರವಾರ, ನ.8: ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2025-26ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ನಿಟ್ಟಿನಲ್ಲಿ "ಉದ್ಯೋಗ ಖಾತರಿ ನಡೆ ಸಬಲತೆಯೇಡೆಗೆ" ಅಭಿಯಾನದಡಿ ಮನೆ ಮನೆ ಭೇಟಿ ನಡೆಸಲಾಯಿತು.
ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಉದ್ಯೋಗ ಹಾಗೂ ಗ್ರಾಮೀಣ ಭಾಗದ ಕೃಷಿಭೂಮಿ ಅಭಿವೃದ್ಧಿಪಡಿಸಲು ಇರುವ ವೈಯಕ್ತಿಕ ಹಾಗೂ ಸಾಮೂದಾಯಿಕ ಕಾಮಗಾರಿಗಳ ಮಾಹಿತಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರೀಶ್ ಹೆಗಡೆ ವಿವರಿಸಿದರು.
ನರೇಗಾದಡಿ ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ, ಎರೆಹುಳು ತೊಟ್ಟಿ, ದನದ ಕೊಟ್ಟಿಗೆ, ಕುರಿಶೇಡ್, ಕೋಳಿಶೇಡ್, ಬದು ನಿರ್ಮಾಣ ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ಸಿಬೆ, ಹಿಪ್ಪು ನೇರಳೆ, ಕಾಳು ಮೆಣಸು ಹಾಗೂ ಇನ್ನಿತರೆ ಬೆಳೆಗಳನ್ನು ತೆಗೆದುಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂಬುದರ ಅರಿವು ಮೂಡಿಸುವ ಮೂಲಕ ನರೇಗಾ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ಹಂಚಿ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.