ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಲು ಕರೆ

ಗದಗ 16:  ಗದಗ ತಾಲೂಕಿನ ಲಕ್ಕುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ವಾರ್ತಾ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ ಗ್ರಾಮ ಸಂಪರ್ಕ ಯೋಜನೆ ಅಡಿಯಲ್ಲಿ  ಜಾನಪದ ಸಂಗೀತ ಮತ್ತು ಬೀದಿ ನಾಟಕದ ಮೂಲಕ ಸರ್ಕಾರದ ಯೋಜನೆಗಳ  ಕುರಿತು ಜನ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮ ಜರುಗಿತು.

    ಕಾರ್ಯಕ್ರಮವನ್ನು ಶಾಲೆಯ ಪ್ರಭಾರ ಮುಖ್ಯ ಗುರುಮಾತೆ ಜಿ.ಪಿ.ಶೇಟ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಸಹಶಿಕ್ಷಕಿ ಅಂಜನಾ ಕರಿಯಲ್ಲಪ್ಪನವರ ಮಾತನಾಡಿ ಸರ್ಕಾರದ ಯೋಜನೆಯಿಂದ ಒಂದು ಗ್ರಾಮ ಅಭಿವೃದ್ಧಿ ಆದರೆ ಒಂದು ದೇಶ ಅಭಿವೃದ್ಧಿ ಆಗಲಿಕ್ಕೆ ಮುನ್ನುಡಿ ಹಾಡಿದಂತಾಗುತ್ತದೆ. ಹಾಗೇ ಗ್ರಾಮದಲ್ಲಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಇದಕ್ಕೆ ಸಹಕರಿಸಬೇಕೆಂದು ಹೇಳಿದರು.

    ಮಲಪ್ರಭಾ ಸಾಂಸ್ಕೃತಿಕ ಕಲಾ ತಂಡ ಕೊಣ್ಣುರು ಬೀದಿ ನಾಟಕ ಮತ್ತು ಗಾಣ ತರಂಗ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಮಾದಿಗರ ಸಂಸ್ಥೆ ಅಸುಂಡಿ ಜಾನಪದ ಸಂಗೀತ ತಂಡದವರು ಶಾಲೆಯ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು.

   ಇದೇ ಸಂದರ್ಭದಲ್ಲಿ ವಾರ್ತಾ  ಇಲಾಖೆಯ ಸಿಬ್ಬಂದಿ ಎಮ್.ಟಿ.ನೇಮರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಸಹಶಿಕ್ಷಕಿಯರಾದ ಎಸ್.ಜಿ.ಕುರವತಿ,್ತ ಪಿ.ಎನ್.ಶಿರೋಳ, ಎಂ.ಪಿ.ಹೊನ್ನಾಪೂರ ಹಾಗೂ ವಿದ್ಯಾರ್ಥಿಗಳು ಇದ್ದರು.