ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರದ ಸಂಪುಟ ವಿಸ್ತರಣೆ

Cabinet expansion of Devendra Fadnavis government in Maharashtra

ನಾಗ್ಪುರ 15: ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಯಾಗಿದೆ.

ಮಹಾರಾಷ್ಟ್ರದ ಎರಡನೇ ರಾಜಧಾನಿ ನಾಗ್ಪುರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವಂಕುಲೆ, ರಾಧಾಕೃಷ್ಣ ವಿಕೆ ಪಾಟೀಲ್, ಅಶಿಶ್ ಶೆಲಾರ್, ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಗಣೇಶ್ ನಾಯಕ್, ಮಂಗಲ್ ಪ್ರತಾಪ್ ಲೊಧಾ, ಜಯಕುಮಾರ್ ರಾವಲ್, ಪಂಕಜ್ ಮುಂಡೆ, ಅತುಲ್ ಸಾವೆ ಸೇರಿದಂತೆ ಮತ್ತಿತರರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಹೊಸ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದಿಂದ ದಾದಾ ಭೂಸೆ, ಶಂಭುರಾಜ್ ದೇಸಾಯಿ, ಸಂಜಯ್ ರಾಥೋಡ್, ಗುಲಾಬ್ರಾವ್ ಪಾಟೀಲ್ ಮತ್ತು ಉದಯ್ ಸಾಮಂತ್ ಮಂತ್ರಿಗಳಾಗಿದ್ದು, ಅಜಿತ್ ಪವಾರ್ ಅವರ ಎನ್‌ಸಿಪಿ ನಾಯಕರಾದ ಮಾಣಿಕ್ರಾವ್ ಕೊಕಾಟೆ, ದತ್ತಾತ್ರೇ ವಿಠ್ಠಲ ಭರ್ನೆ, ಹಸನ್ ಮುಶ್ರೀಫ್, ಅದಿತಿ ಸುನೀಲ್ ತಟ್ಕರೆ ಮತ್ತು ಧನಂಜಯ್ ಮುಂಡೆ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸಂಪುಟ ವಿಸ್ತರಣೆಗೂ ಮುನ್ನಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗ್ಪುರದಲ್ಲಿ ಅದ್ದೂರಿ ರೋಡ್ ಶೋ ನಡೆಸಿದರು. ಫಡ್ನವೀಸ್, ಅವರ ಪತ್ನಿ ಅಮೃತಾ ಫಡ್ನವಿಸ್, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಮತ್ತಿತರರೊಂದಿಗೆ ನಾಗ್ಪುರ ವಿಮಾನ ನಿಲ್ದಾಣದಿಂದ ಅಲಂಕೃತ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಮಾರ್ಗದುದ್ದಕ್ಕೂ ಅವರನ್ನು ಸ್ವಾಗತಿಸುವ ಬ್ಯಾನರ್ ಗಳು ರಾರಾಜಿಸಿದವು.

ಡಿಸೆಂಬರ್ 5 ರಂದು ದೇವೇಂದ್ರ ಫಡ್ನವಿಸ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳ ನಂತರ ಸಂಪುಟ ವಿಸ್ತರಣೆಯಾಗಿದೆ.