ಸಿಟಿ ರವಿ ರವರ ಸುರಕ್ಷತೆಯ ದೃಷ್ಟಿಯಿಂದ ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು: ಪೊಲೀಸರ ಸ್ಪಷ್ಟನೆ

CT Ravi was shifted to different places for for security reasons: Police clarification

ಬೆಳಗಾವಿ 24: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಬಿಜೆಪಿ ಶಾಸಕರನ್ನು ಬಂಧಿಸಿದ ಪೊಲೀಸರು ರಾತ್ರಿಯಿಡಿ ಅವರನ್ನು ಸುತ್ತಾಡಿಸಿದ  ಬಗ್ಗೆ  ಬೆಳಗಾವಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಭದ್ರತಾ ಕಾರಣಗಳಿಗಾಗಿ ಮತ್ತು ಸಾರ್ವಜನಿಕರಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಬಿಜೆಪಿ ಮುಖಂಡ ಸಿ.ಟಿ ರವಿ ಅವರನ್ನು ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು ಎಂದು  ಪೊಲೀಸರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 75 (ಲೈಂಗಿಕ ಕಿರುಕುಳ) ಮತ್ತು 79 (ಮಹಿಳೆಯರ ಮರ್ಯಾದೆಗೆ ಧಕ್ಕೆ ತರುವ ಮಾತು, ಹಾವಭಾವ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ರವಿಯನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಸಿಟಿ ರವಿ ರವರ ಭದ್ರತಾ ಅಂಶವನ್ನು ಪರಿಗಣಿಸಿ ಹಾಗೂ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಬಳಿ ಅಪಾರ ಜನಸ್ತೋಮ ಸೇರಿದ್ದರಿಂದ ಅವರನ್ನು ಖಾನಾಪೂರ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ಖಾನಾಪೂರದಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದ ಮಾಧ್ಯಮ ಪ್ರತಿನಿಧಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಸೇರಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದರು. ಅಲ್ಲದೇ ಹೆಚ್ಚುವರಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇದ್ದು. ಈ ಎಲ್ಲ ಅಂಶಗಳು ಸಹ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುವ ಸಾಮರ್ಥ್ಯ ಹೊಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಟಿ ರವಿ ರವರ ಸುರಕ್ಷತೆಯ ದೃಷ್ಟಿಯಿಂದ ಖಾನಾಪೂರದಿಂದ ಅವರನ್ನು ರಾಮದುರ್ಗಕ್ಕೆ ಸ್ಥಳಾಂತರಿಸಲಾಯಿತು. ಎಲ್ಲ ಮುನ್ನೆಚ್ಚರಿಕೆಗಳ ಹೊರತಾಗಿಯೂ ಮಾಧ್ಯಮಗಳು ಹಾಗೂ ಇನ್ನಿತರ ವ್ಯಕ್ತಿಗಳು ಬೆಂಗಾವಲು ಪಡೆಯನ್ನು ಹಿಂಬಾಲಿಸಿದರು. ಸಿಟಿ ರವಿ ಅವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೆಂಗಾವಲು ಪಡೆಯು ಅವರೆಲ್ಲರಿಂದ ತಪ್ಪಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಪ್ರಕ್ರಿಯೆಯುದ್ದಕ್ಕೂ ಪೊಲೀಸರು ಸಿಟಿ ರವಿ ಅವರಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಮರುದಿನ ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ವಿವರಣೆ ನೀಡಿದ್ದಾರೆ. ತಮ್ಮ ಬಂಧನದ ಸಮಯದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘನೆಯಾಗಿದೆ ಎಂದು ಸಿಟಿ ರವಿ ಆರೋಪಿಸಿದ ಕೆಲವು ದಿನಗಳ ನಂತರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಡಿಸೆಂಬರ್ 19 ರಂದು ವಿಧಾನ ಪರಿಷತ್ ಸಭಾಂಗಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಸಿದ ಆರೋಪದ ಮೇಲೆ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ರವಿ ಅವರನ್ನು ಪೊಲೀಸರು ಬಂಧಿಸಲಾಗಿತ್ತು.