ಸಿಪಿಐಎಂ ಹಿರಿಯ ನಾಯಕ ಬುದ್ದದೇವ್ ಭಟ್ಟಾಚಾರ್ಯ ಆರೋಗ್ಯ ಸ್ಥಿರ; ವೈದ್ಯರ ಸ್ಪಷ್ಟನೆ

ಕೋಲ್ಕತ್ತಾ, ಸೆ 7:  ಎದೆನೋವು ಮತ್ತು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಸಿಪಿಐಎಂ ಹಿರಿಯ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಶನಿವಾರ ತಿಳಿಸಿವೆ. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುದ್ದದೇವ್ ಭಟ್ಟಾಚಾರ್ಯ ಅವರನ್ನು ನಿನ್ನೆ ರಾತ್ರಿ ದಕ್ಷಿಣ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಐಸಿಸಿಯುಗೆ ದಾಖಲಿಸಲಾಗಿದ್ದು, ಒಂದು ಬಾಟಲಿ ರಕ್ತ ನೀಡಲಾಗಿದೆ. ಅವರ ಹಿಮೋಗ್ಲೋಬಿನ್ ಪ್ರಮಾಣ ಪರಿಶೀಲಿಸಿದ ಬಳಿಕ ಅವರಿಗೆ ಮತ್ತೊಮ್ಮೆ ರಕ್ತ ನೀಡಲಾಗುತ್ತದೆ.ಆಮ್ಲಜನಕವನ್ನೂ ಅವರಿಗೆ ಪೈಪ್ ಮೂಲಕ ನೀಡಲಾಗುತ್ತಿದೆ.   ಬುದ್ಧವೇವ್ ಅವರು ಮನೆಗೆ ಮರಳಲು ಬಯಸಿದ್ದಾರೆ ಎಂದು ಸಿಪಿಐಎಂ ನಾಯಕ ರಾಬಿನ್ ದೇವ್ ಹೇಳಿದ್ದಾರೆ. ಆದರೆ, ಈಗ ಅವರ ಆರೋಗ್ಯವನ್ನು ಪರಿಗಣಿಸಿ ಖಾಸಗಿ ಆಸ್ಪತ್ರೆಯಲ್ಲಿ ಉಳಿಯಲು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಖಾಯಿಲೆಗಳ ಪತ್ತೆಗೆ ವೈದ್ಯರು ಕೆಲವು ಪರೀಕ್ಷೆಗಳನ್ನು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು. 75 ವರ್ಷ ಪ್ರಾಯದ ಸಿಪಿಐಎಂ ಹಿರಿಯ ನಾಯಕ ದೀರ್ಘಕಾಲದ ಸಿಒಪಿಡಿ ಖಾಯಿಲೆಯಿಂದ  ಬಳಲುತ್ತಿದ್ದಾರೆ. ಎಂಟು ಮಂದಿ ವಿಶೇಷ ವೈದ್ಯರ ತಂಡ ಭಟ್ಟಾಚಾರ್ಯ ಅವರ ಆರೋಗ್ಯ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಟ್ಟಾಚಾರ್ಯ ಅವರು ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಪರಿಸ್ಥಿತಿಯ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದ್ದರು. ರಾಜ್ಯಪಾಲ ಜಗದೀಪ್ ಧಾನ್ಕರ್, ಸಿಪಿಐ ಹಿರಿಯ ಮುಖಂಡರಾದ ಸಾುಜ್ರ್ಯ ಕಾಂತ ಮಿಶ್ರಾ ಮತ್ತು ಕಾಂಗ್ರೆಸ್ ಮುಖಂಡ ಪ್ರದೀಪ್ ಭಟ್ಟಾಚಾರ್ಯ ಮತ್ತು ಇತರರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಭಟ್ಟಾಚಾರ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ.