,ಮಾ ೧೨: ದೇಶದಲ್ಲಿ ಕೊರೊನಾ ಸೋಂಕು ಭೀತಿಯ ಹಿನ್ನಲೆಯಲ್ಲಿ ಲೋಕಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಯಾವುದೇ ಪ್ರಸ್ತಾವನೆ ತಮ್ಮ ಮುಂದೆ ಇಲ್ಲ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಗುರುವಾರ ತಿಳಿಸಿದ್ದಾರೆ.ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿರ್ಲಾ, ವಿದೇಶಿಯರು ಸೇರಿದಂತೆ ದೇಶದಲ್ಲಿ ಒಟ್ಟು ೭೩ ಕೋವಿಡ್ -೧೯ ಸೋಂಕು ದೃಢಪಟ್ಟಿರುವ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಗ್ಗೆ ತಮಗೆ ಮಾಹಿತಿ ನೀಡಿದೆ ಎಂದು ತಿಳಿಸಿದರು.ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಕೊರಾನಾ ವೈರಸ್ ಸೋಂಕು ಸಂಕ್ರಾಮಿಕ ಎಂದು ಘೋಷಿಸಿದ್ದು, ಕರ್ನಾಟಕದ ಕಲಬುರಗಿಯಲ್ಲಿ ೭೬ ವರ್ಷದ ವ್ಯಕ್ತಿಯೊಬ್ಬರು ಶಂಕಿತ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದು, ಕರೋನಾ ಸಂಬಂಧ ಭಾರತದಲ್ಲಿ ಸಂಭವಿಸಿರುವ ಮೊದಲ ಸಾವು ಎಂದು ಹೇಳಲಾಗುತ್ತಿದೆ. ಮಂಗಳವಾರ ರಾತ್ರಿ ಮೃತಪಟ್ಟ ವೃದ್ಧ ವ್ಯಕ್ತಿ ಉಸಿರಾಟ ತೊಂದರೆ, ಶೀತ ಹಾಗೂ ಕಫದ ಸಮಸ್ಯೆ ಎದುರಿಸುತ್ತಿದ್ದರು. ಈ ನಡುವೆ ದೇಶದಲ್ಲಿ ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಚ್ ೧೩ ರಿಂದ ಏಪ್ರಿಲ್ ೧೫ರವರೆಗೆ ಜಾರಿಗೆ ಬರುವಂತೆ ಎಲ್ಲ ವಿದೇಶಿ ನಾಗರೀಕರಿಗೆ ಕಲ್ಪಿಸಲಾಗಿರುವ ವೀಸಾಗಳನ್ನು ಅಮಾನತ್ತುಪಡಿಸಿದೆ. ಕೇರಳದಲ್ಲಿ ನಿನ್ನೆ ಒಂದೇ ದಿನ ಎಂಟು ಹೊಸ ಕೋವಿಡ್ -೧೯ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ೧೭ಕ್ಕೆ ಏರಿಕೆಯಾಗಿದೆ. ಇದರಲ್ಲಿ ಈಗಾಗಲೇ ಚೇತರಿಸಿಕೊಂಡುವ ಮೂರು ಪ್ರಕರಣಗಳೂ ಸೇರಿವೆ.ಕೋವಿಂದ್ -೧೯ ಸೋಂಕು ಈವರೆಗೆ ವಿಶ್ವದ ೧೧೪ ದೇಶಗಳ ೧.೨ಲಕ್ಷ ಮಂದಿಗೆ ತಗುಲಿದ್ದು, ೪,೨೯೧ ಮಂದಿ ಸಾವನ್ನಪ್ಪಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್, ಕೊರೊನಾ ಸೋಂಕು ಹಬ್ಬದಂತೆ ತುರ್ತು ಹಾಗೂ ಆಕ್ರಮಣಕಾರಿ ಕ್ರಮ ಕೈಗೊಳ್ಳುವಂತೆ ಎಲ್ಲ ದೇಶಗಳಿಗೆ ನಿತ್ಯ ಕರೆನೀಡುತ್ತಿದ್ದೇವೆ. ಈ ಬಗ್ಗೆ ಅಪಾಯದ ಘಂಟೆಯನ್ನು ಸ್ಪಷ್ಟ ಹಾಗೂ ಜೋರಾಗಿ ಬಾರಿಸಿದ್ದೇವೆ ಎಂದು ಅವರು ಹೇಳಿದ್ದಾರೆ