ಮುಂಬೈ, ನ 5: ಮಹಾರಾಷ್ಟ್ರ ವಿಧಾನಸಭೆಯ ಅವಧಿ ಇದೇ 9 ಕ್ಕೆ ಮುಕ್ತಾಯವಾಗಲಿದ್ದು, ಅಷ್ಟರೊಳಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಸ್ಥಾಪನೆಯಾಗುವುದು ಡೋಲಾಯಮಾನವಾಗಿದೆ. ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟಕ್ಕೆ ಸರ್ಕಾರ ರಚನೆ ಮಾಡುವಷ್ಟು ಬಹುಮತ ಲಭಿಸಿದ್ದರೂ ಅಧಿಕಾರ ಹಂಚಿಕೆಗಾಗಿ ಹಗ್ಗಜಗ್ಗಾಟ ಮುಂದುವರಿದಿದೆ. ಒಂದು ರೀತಿ ನಾ ಕೊಡೆ, ನೀ ಬಿಡೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸಮಾನ ಅಧಿಕಾರ ಹಂಚಿಕೆಗೆ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದು, ಅದನ್ನು ಈಗ ಪಾಲನೆ ಮಾಡಬೇಕು ಎಂದು ಶಿವಸೇನೆ ಬಿಗಿಪಟ್ಟು ಹಿಡಿದಿದೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ರೊಟೇಷನ್ ಆಧಾರದ ಮೇಲೆ ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡದೇ ಇರಲು ಬಿಜೆಪಿ ಗಟ್ಟಿ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ. ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಡುವೆ ನಡೆದ ಮಾತುಕತೆಯ ನಂತರ ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡದೇ ಇರಲು ಬಿಜೆಪಿ ನಿರ್ಧಾರ ಮಾಡಿದೆ ಎಂದು ಗೊತ್ತಾಗಿದೆ. ಹೀಗಾಗಿ ಇಂದು ಅಥವಾ ನಾಳೆ ಹೊಸ ಸರ್ಕಾರ ರಚನೆಯಾಗಲಿದೆ ಎಂಬುದು ಸತ್ಯಕ್ಕೆ ದೂರವಾಗಲಿದೆ. ಶಿವಸೇನೆ ಎನ್ ಸಿ ಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡುವುದಾದರೆ ಮಾಡಲಿ, ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.