ಲೋಕದರ್ಶನ ವರದಿ
ಕೊಪ್ಪಳ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗನಲ್ಲ, ಆತನೋರ್ವ ಸುಳ್ಳಿನ ಸರದಾರ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವುದು ಸುಳ್ಳಿನ ಸರ್ಕಾರ ಇವರಿಗೆ ನಿಜಕ್ಕೂ ಧಮ್ ಇದ್ರೆ ವಿಧಾನಸಭೆಯನ್ನು ವಿಸರ್ಜನೆ ಮಾಡಲಿ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ.
ಅವರು ಬುಧುವಾರ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿರುವ ವಿ.ಎಸ್. ಉಗ್ರಪ್ಪ, ಬಿಜೆಪಿ ನಾಯಕರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ನಡುವೆ ಸುಳ್ಳುಗಳನ್ನು ಹರಡುವ ಸುಳ್ಳಿನ ರಾಜಕಾರಣ ನಡೆಸುತ್ತಿದ್ದಾರೆ. ಈ ನಡುವೆ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಶಾಶ್ವತವಾಗಿ ವಿರೋಧ ಪಕ್ಷದಲ್ಲಿರುತ್ತೆ ಎಂದು ಹೇಳಿಕೆ ನೀಡುತ್ತಾರೆ. ಬಿಜೆಪಿಯವರಿಗೆ ಧಮ್ ಇದ್ರೆ, ತಾಖತ್ ಇದ್ರೆ ವಿಧಾನಸಭೆಯನ್ನು ವಿಸರ್ಜನೆ ಮಾಡಲಿ ಎಂದು ಸವಾಲು ಹಾಕಿದ ಅವರು ಆಗ ಜನಾದೇಶ ಬಂದು ಜನತೆ ಯಾರಿಗೆ ಆಶೀರ್ವಾದ ಮಾಡುತ್ತಾರೆ ಆಗ ರೂಲಿಂಗ್ ಪಕ್ಷ ಯಾರು ಇರುತ್ತಾರೆ ಎಂದು ಗೊತ್ತಾಗುತ್ತದೆ.
ರಾಜ್ಯ ಸರ್ಕಾರದ ನೆರೆ ಪರಿಹಾರ ಕಾರ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ಪ್ರವಾಹದಿಂದ 22 ಜಿಲ್ಲೆಗಳ 103 ತಾಲೂಕಿನ ಜನ ತತ್ತರಿಸಿದ್ದಾರೆ. 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 115 ಜನ ಮಳೆಯಿಂದ ಸಾವನ್ನಪ್ಪಿದ್ದಾರೆ. ಪ್ರವಾಹದಿಂದ 1 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಆದರೆ, ಕೇಂದ್ರದಿಂದ ಈವರೆಗೆ 1,200 ಕೋಟಿ ಮಾತ್ರ ಪರಿಹಾರ ಹಣ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನೂ ರಾಜ್ಯದಲ್ಲೂ ಬಿಜೆಪಿ ನಾಯಕರು ಅಧಿಕಾರ ಉಳಿಸಿಕೊಳ್ಳುವ ಜಂಜಾಟದಲ್ಲಿದ್ದು ನೆರೆ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರಕ್ಕೆ ನಿಜಕ್ಕೂ ರೈತರ ಮೇಲೆ ಕಾಳಜಿ ಇದ್ದರೆ ರಾಷ್ಟ್ರೀಯ ಮತ್ತು ಸಹಕಾರ ಬ್ಯಾಂಕ್ನಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲಿ" ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, "ಟಿಪ್ಪು ಜಯಂತಿಯನ್ನು ಬಿಜೆಪಿ ವಿವಾದಾತ್ಮಕ ವಿಚಾರವನ್ನಾಗಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಬೆಂಗಳೂರಿಗೆ ಆಗಮಿಸಿದ್ದಾಗ ಟಿಪ್ಪು ಸುಲ್ತಾನ್ ಕುರಿತು ಹಾಡಿ ಹೊಗಳಿದ್ದರು. ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಪಕ್ಷ ಕಟ್ಟಿದ್ದಾಗಲೂ ಟಿಪ್ಪು ಗುಣಗಾನ ಮಾಡಿದ್ದರು. ಆದರೆ, ಇದೀಗ ಟಿಪ್ಪು ಜಯಂತಿಯನ್ನು ಮುಂದಿಟ್ಟು ಗೋಸುಂಬಿ ರಾಜಕಾರಣ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ನಗರಸಭೆಯ ಹಿರಿಯ ಸದಸ್ಯರಾದ ಅಮ್ಜದ್ ಪಟೇಲ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ಕೃಷ್ಣ ಇಟ್ಟಂಗಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.