ಬೆಂಗಳೂರು, ಮೇ 13,ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾವ್ ರಾಜ್ ಹೆಗ್ಡೆ ಅವರ ನೇತೃತ್ವದಲ್ಲಿ ಮದ್ಯ ಮಾರಾಟಗಾರರ ನಿಯೋಗವೊಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿಂದು ಭೇಟಿಯಾಗಿ ಮಾತುಕತೆ ನಡೆಸಿತು.ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಗ್ಡೆ, ಲಾಕ್ ಡೌನ್‌ನಿಂದಾಗಿ ಈಗಾಗಲೇ ನಮಗೆ 800ರಿಂದ ಒಂದು ಸಾವಿರ ಕೋಟಿ ನಷ್ಟವಾಗಿದೆ.
ಸಂಗ್ರಹವಿರುವ ಮದ್ಯ ಮಾರಾಟ ಮಾಡಲು ಸರ್ಕಾರ ಅವಕಾಶ ನೀಡಿದೆ. ಅದೇ ರೀತಿ ಮದ್ಯ ಖರೀದಿಗೂ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮದ್ಯ ಮಾರಾಟ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.ಜೊತೆಗೆ ಕನಿಷ್ಠ ಒಂದು ತಿಂಗಳ ಸನ್ನದು ಶುಲ್ಕವನ್ನು ಮುಂದಿನ ವರ್ಷದ ಸನ್ನದು ಶುಲ್ಕದೊಂದಿಗೆ ಹೊಂದಾಣಿಕೆ ಮಾಡಿಕೊಡಲು ಕೇಳಿದ್ದೇವೆ. 2020-21 ಸಾಲಿನ ಸನ್ನದು ಶುಲ್ಕವನ್ನು ನಾಲ್ಕು ಕಂತುಗಳನ್ನು ಕಟ್ಟಲು ಅವಕಾಶ ನೀಡುವಂತೆ ಕೇಳಿದ್ದೇವೆ. ವಿದ್ಯುತ್ ಬಿಲ್ ಪಾವತಿ / ರಿಯಾಯತಿ ಬಗ್ಗೆ ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಲು ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.ಬ್ಯಾಂಕ್ ಸಾಲದ ಕಂತು ಮತ್ತು ಬಡ್ಡಿ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮನವಿ ಮಾಡಿಕೊಂಡಿದ್ದೇವೆ. ಆಸ್ತಿ ತೆರಿಗೆ ಕಟ್ಟಡ ತೆರಿಗೆಗಳಲ್ಲಿ ರಿಯಾಯಿತಿ ನೀಡಬೇಕು ಎಂದೂ ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.