ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಆಯ್‌ಟಿಯು ಪ್ರತಿಭಟನೆ: ಮನವಿ
ಬೆಳಗಾವಿ 12: ಗ್ರಾಮ ಪಂಚಾಯತನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಸ್ವಚ್ಛ ವಾಹಿನಿ ನೌಕರರ ಹಾಗೂ ವಾಹನ ಚಾಲಕರ ಏಕರೂಪ ವೇತನಕ್ಕೆ ಹಾಗೂ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿಆಯ್‌ಟಿಯು ಬೆಳಗಾವಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ ಎದುರು ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ಪ್ರತಿ ಪಂಚಾಯತನಲ್ಲಿ ಸ್ವಚ್ಛ ವಾಹಿನಿ ನೌಕರರ ಹಾಗೂ ವಾಹನ ಚಾಲಕರ ವೇತನ ಬೇರೆ ಬೇರೆ ಇದೆ. ಏಕ ರೂಪದಲ್ಲಿ ವೇತನ ನೀಡುತ್ತಿಲ್ಲ. ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಪ್ರಸ್ತುತ ಸಂಜೀವಿನಿ ಗ್ರಾಮಮಟ್ಟದ ಒಕ್ಕೂಟಗಳು ವಾಹನ ಚಾಲನೆ, ಘನತ್ಯಾಜ್ಯ ಸಂಗ್ರಹಣೆ ಸಾಗಾಣಿಕೆ ಹೀಗೆ ಹಲವಾರು ಕೆಲಸಗಳನ್ನು ಮಾಡುತ್ತಿದ್ದು, ಏಕರೂಪ ವೇತನವಿಲ್ಲದೆ ಪರದಾಡುವಂತಾಗಿದೆ.ಕೆಲವೊಂದು ಕಡೆ ಎರಡ್ಮೂರು ತಿಂಗಳಿಂದವೇತನವನ್ನೇ ನೀಡಿಲ್ಲ. ಆದ್ದರಿಂದ ಕೂಡಲೇ ವೇತನ ಪಾವತಿಸಬೇಕು.
ಪಂಚಾಯತ ವ್ಯಾಪ್ತಿಯ ಒಕ್ಕೂಟಗಳಿಂದ ವಾಹನ ಚಾಲಕರೆಂದು ನೇಮಕ ಮಾಡಿಕೊಂಡರೂ ಅವರಿಗೆ ಕೆಲಸ ನೀಡಿಲ್ಲ. ಒಂದೊಂದು ಪಂಚಾಯತನಲ್ಲಿ ವಾಹನಗಳಿದ್ದರೂ ಚಾಲಕರನ್ನು ನೇಮಕ ಮಾಡಿಕೊಂಡಿಲ್ಲ. ಅವರಿಗೆ ತರಬೇತಿ ನೀಡಿದ್ದರೂ ಕೆಲಸ ನಿರಾಕರಿಸಲಾಗಿದೆ. ಸುಮಾರು ಪಂಚಾಯತಗಳಲ್ಲಿ ಕಸ ವಿಲೇವಾರಿ ಘಟಕಗಳು ಇಲ್ಲದ ಕಾರಣ ನೇಮಕಾತಿಗೊಂಡಿರುವ ಮಹಿಳಾ ನೌಕರರಿಗೆ ಕೆಲಸವನ್ನು ನೀಡಿಲ್ಲ. ಇವರಿಗೆಲ್ಲ ಕೂಡಲೇ ಕೆಲಸ ನೀಡಬೇಕು. ಕೆಲ ಪಂಚಾಯತಗಳಲ್ಲಿ ವೇತನ ನೀಡಲು ಆಗುವುದಿಲ್ಲ ಎಂಬ ಕಾರಣಕ್ಕೆ ನೌಕರರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ವಾಹನಕ್ಕೆ ಪಂಚಾಯತನವರೇ ಡಿಸೈಲ್ ಹಾಕಬೇಕು. ವಾಹನ ಚಾಲಕರ ಲೈಸನ್ಸ್ ನವೀಕರಣ ಮಾಡಿಕೊಡಬೇಕು. ಹಾವೇರಿ ಜಿಲ್ಲಾ ಪಂಚಾಯತ ಸೂಚಿಸಿದಂತೆ ವೇತನವನ್ನು 15ನೇ ಹಣಕಾಸಿನಲ್ಲಿ ನೀಡಲು ಸೂಚಿಸಬೇಕು. ಸ್ವಚ್ಛ ವಾಹಿನಿ ನೌಕರರ ಕುಂದು ಕೊರತೆಗಳ ಸಭೆಯನ್ನು ಕರೆಯಬೇಕು ಎಂಬ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.ಸಿಆಯ್‌ಟಿಯು ಬೆಳಗಾವಿ ಜಿಲ್ಲಾ ಸಮಿತಿಯ ಅಧ್ಯಕ್ಷ ಜಿ.ಎಂ. ಜೈನೇಖಾನ,ಕಾರ್ಯದರ್ಶಿ ಮಾಡೆಪ್ಪ ಭಜಂತ್ರಿ, ಸವದತ್ತಿಯ ಶಮಶಾದ ಕಲ್ಲೂರ, ಬೈಲಹೊಂಗಲದ ರುದ್ರವ್ವ ಮಾರದ, ಗೋಕಾಕದ ರೂಪಾ ಬಡಿಗೇರ, ಹುಕ್ಕೆರಿಯ ನಿರ್ಬುನಾ ತೆಳಗಡೆ, ಚಿಕ್ಕೋಡಿಯ ಸಂಗೀತಾ ದಂಡಿನವರ, ನಿಪ್ಪಾಣಿಯ ಅಶ್ವಿನಿ ಅಮದರ, ಅಥಣಿಯ ಶಿಲ್ಪಾ ಕಂಬಳೆ, ರಾಯಬಾಗದ ಸುಧಾರಾಣಿ ಕಾಂಬಳೆ, ಬೆಳಗಾವಿಯ ಸ್ನೇಹಾ ಕಾಂಬಳೆ, ನಿರ್ಮಲಾ ಪಾಲ್ಕರ, ಖಾನಾಪೂರದ ಅಶ್ವಿನಿ ಮಾದರ ಮೊದಲಾದವರಿದ್ದರು.