ಗ್ರಾಮೀಣ ಜನರಿಗೆ ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಸಿಇಓ ಸೂಚನೆ
ವಿಜಯಪುರ ಮಾ.17 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಗಳ ಲಾಭ ನಿಗದಿತ ಅವಧಿಯಲ್ಲಿ ಗ್ರಾಮೀಣ ಜನರಿಗೆ ತಲುಪಿಸುವ ಮೂಲಕ ಪ್ರಗತಿ ಸಾಧಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸೂಚಿಸಿದರು.
ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರೀಶೀಲನೆ ನಡೆಸಿದ ಅವರು, ಯೋಜನೆಗಳ ಪ್ರಗತಿಗೆ ಸ್ಥಳೀಯ ಮಟ್ಟದ ಅಧಿಕಾರಿ, ಸಿಬ್ಬಂದಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಎಲ್ಲ ಅಧಿಕಾರಿ-ಸಿಬ್ಬಂದಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ನಿಗದಿತ ಸಮಯದಲ್ಲಿ ಇಲಾಖೆಯ ಎಲ್ಲ ಯೋಜನೆಗಳ ಪ್ರಗತಿ ಸಾಧಿಸುವಂತೆ ಅವರು ಹೇಳಿದರು.
ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆ ಮತ್ತು ಮಹಿಳಾ ಗ್ರಾಮ ಸಭೆ ದಿನಾಂಕಗಳನ್ನು ಪ್ರತಿ ಗ್ರಾ.ಪಂ. ಗಳಲ್ಲಿ ಕಡ್ಡಾಯವಾಗಿ ನಿಗದಿಪಡಿಸಬೇಕು. ಜೊತೆಗೆ ಬಾಕಿ ಉಳಿದ ಗ್ರಾಮ ಸಭೆಗಳ ದಿನಾಂಕಗಳನ್ನು ಹಾಗೂ ಸಭೆಗಳನ್ನು ನಾಳೆ 18.03.2025ರೊಳಗೆ ಪೂರ್ಣಗೊಳಿಸಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿದ್ದಲ್ಲಿ ಅಂತಹ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಅವರು ಅವರು ಎಚ್ಚರಿಕೆ ನೀಡಿದರು.
ಸಾರ್ವಜನಿಕರಿಂದ ಸ್ವೀಕೃತಿಯಾದ ಇ-ಸ್ವತ್ತು ಸಕಾಲ ಅರ್ಜಿಗಳು ಮತ್ತು 'ಜನಸ್ಪಂದನ'- ಕರ್ನಾಟಕ ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಐಜಿಪಿಆರ್‌ಎಸ್‌ಅಡಿ ಸ್ವೀಕೃತಗೊಂಡ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಬೇಕು. ಪ್ರತಿ ಮಾಹೆಯ ಮೊದಲನೇ 3 ದಿನಗಳಂದು ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆ ಮತ್ತು ಮಹಿಳಾ ಗ್ರಾಮ ಸಭೆಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಮತ್ತು ಪ್ರತಿವಾರ ನಿರಂತರವಾಗಿ ಮತ್ತು ಕಡ್ಡಾಯವಾಗಿ ಇ-ಸ್ವತ್ತು ಸಕಾಲ ಅರ್ಜಿಗಳು ಮತ್ತು 'ಜನಸ್ಪಂದನ'- ಕರ್ನಾಟಕ ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಐಜಿಪಿಆರ್‌ಎಸ್‌ಅಡಿ ಸ್ವೀಕೃತಗೊಂಡ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ತೆರಿಗೆ ಸಂಗ್ರಹಣೆ- ರಾಜ್ಯದಲ್ಲಿಯೇ ಬಬಲೇಶ್ವರ-ಚಡಚಣ ಪ್ರಗತಿ : ಗ್ರಾಮ ಪಂಚಾಯತಿ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯದಲ್ಲಿಯೇ ಬಬಲೇಶ್ವರ ಹಾಗೂ ಚಡಚಣ ತಾಲೂಕುಗಳಲ್ಲಿ ಶೇ.100 ರಷ್ಟು ಪ್ರಗತಿಯನ್ನು ಸಾಧಿಸಿವೆ. ಪ್ರಸ್ತುತ ಸಾಲಿನಲ್ಲಿ ಈಗ ಜಿಲ್ಲೆಯ ತೆರಿಗೆ ಸಂಗ್ರಹಣೆಯ ಪ್ರಗತಿಯು ಶೇ.69.00 ರಷ್ಟಿದೆ. ಮಾರ್ಚ್ ಅಂತ್ಯದವರೆಗೆ ಉಳಿದ ಎಲ್ಲ ತಾಲೂಕುಗಳಲ್ಲಿ ಕಡ್ಡಾಯವಾಗಿ ಶೇ. 100 ರಷ್ಟು ಪ್ರಗತಿ ಸಾಧಿಸುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ)ಯಡಿ ಫಲಾನುಭವಿಗಳ ಮಂಜೂರಾತಿ ಪ್ರಕ್ರಿಯೆ ಮುಂಬರುವ ಒಂದು ವಾರದಲ್ಲಿ ಪ್ರತಿ ತಾಲೂಕಿನಲ್ಲಿ ಶೇ.40.00 ರಷ್ಟು ಪ್ರಗತಿ ಸಾಧಿಸಬೇಕು. ಸದರಿ ಯೋಜನೆಯಡಿ ವಸತಿ ರಹಿತ ಫಲಾನುಭವಿಗಳ ಸಮೀಕ್ಷೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಸಮೀಕ್ಷೆ ಮಾಡಲು ಬಾಕಿ ಉಳಿದ ಫಲಾನುಭವಿಗಳನ್ನು ಸೇರೆ್ಡಗೊಳಿಸಿ, ಅರ್ಹ ಫಲಾನುಭವಿಗಳು ಆಯ್ಕೆ ಪಟ್ಟಿಯಿಂದ ಹೊರಗುಳಿಯದಂತೆ ತುರ್ತು ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ನೀಡಲಾಗಿರುವ ಎಂಪಿಕ್ ವಾರ್ಷಿಕ ಗುರಿಗೆ ಎದುರಾಗಿ ಶೇ. 90.00 ರಷ್ಟು ಪ್ರಗತಿ ಸಾಧಿಸಬೇಕು. ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿ ಅಭಿವೃದ್ಧಿ ಹಂತದಲ್ಲಿರುವ ಜಮೀನು ಪ್ರಕರಣಗಳ ಕುರಿತು ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು ಪ್ರಗತಿ ಸಾಧಿಸಬೇಕು. ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹಂತದಲ್ಲಿರುವ ಜಮೀನಿನ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಆಕರ್ಷಣೀಯ ಚಿತ್ರ(ಬಾಲಾ ಪೇಂಟಿಂಗ್)ಗಳನ್ನು ಬಿಡಿಸುವುದು. ಮಕ್ಕಳಿಗೆ ಬೆಂಚ್ ಗಳು, ವಿನೂತನ ಆಟಿಕೆ ಸಾಮಗ್ರಿಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಪೂರೈಸುವುದು. ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು, ಸದರಿ ಕೇಂದ್ರಗಳಲ್ಲಿ ಸ್ಥಳಾವಕಾಶ ಇದ್ದಲ್ಲಿ ಬಯೋ ಫೆನ್ಸಿಂಗ್ ಮಾಡಲು ಕ್ರಮ ಕೈಗೊಳ್ಳುವುದು, ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗಳನ್ನು ವ್ಯವಸ್ಥಿತವಾಗಿಡುವುದು. ಬಹುಮುಖ್ಯವಾಗಿ ಮಕ್ಕಳ ಸ್ನೇಹಿ ಶೌಚಾಲಯ ನಿರ್ಮಾಣ, ವಿಶೇಷವಾಗಿ ಮಾರ್ಚ್-2025ರ ಮಾಹೆ ಪೂರ್ಣಗೊಳ್ಳುವಷ್ಟರಲ್ಲಿ ವಿಶೇಷ ಅಭಿಯಾನದ ರೀತಿಯಲ್ಲಿ ಪ್ರತಿ ಗ್ರಾ.ಪಂ. ಗಳಲ್ಲಿ ಕನಿಷ್ಠ 4-5 ಅಂಗನವಾಡಿ ಕೇಂದ್ರಗಳಲ್ಲಿ ಸಂಪೂರ್ಣ ಅಭಿವೃದ್ಧಿ ಕಾರ್ಯಗಳಾದ ಮಕ್ಕಳಿಗೆ ಆಕರ್ಷಕ ಪೇಂಟಿಂಗ್(ಬಾಲಾ ಪೇಂಟಿಂಗ್), ಪ್ಲಾಸ್ಟರ್, ಸಂಪೂರ್ಣ ದುರಸ್ತಿ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿ, ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅವರು ಸೂಚನೆ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಇರುವ ಸರ್ಕಾರಿ ಗ್ರಂಥಾಲಯಗಳಲ್ಲಿ ವಿದ್ಯುತ್ ವ್ಯವಸ್ಥೆ, ಉತ್ತಮ ಬೆಳಕು ಮತ್ತು ಗಾಳಿ ಇರುವಂತೆ ವ್ಯವಸ್ಥೆ ಮಾಡುವುದು. ಗ್ರಂಥಾಲಯಗಳ ಸಂಪೂರ್ಣ ದುರಸ್ತಿ ಕಾರ್ಯ ಕೈಗೊಂಡು, ಪೇಂಟಿಂಗ್ ಮಾಡಿಸುವುದು. ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಒದಗಿಸುವುದು. ಪುಸ್ತಕಗಳನ್ನು ಇರಿಸಲು ರಾ್ಯಕ್ ವ್ಯವಸ್ಥೆ, ಗಣಕ ಯಂತ್ರ ವ್ಯವಸ್ಥೆ, ವಿನೂತನ ಕಲಿಕಾ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಬೇಕು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗ್ರಂಥಾಲಯಗಳಿಗೆ ನೊಂದಾಯಿಸಿಕೊಳ್ಳಲು ಕ್ರಮ ವಹಿಸುವಂತೆ ಸೂಚಿಸಿದ ಅವರು, ಖುದ್ದಾಗಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸುವುದಾಗಿ ಅವರು ತಿಳಿಸಿದರು.
ಬಳಿಕ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ವಿಜಯಪುರ ಜಿಲ್ಲೆಗೆ 42.00ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 40.00ಲಕ್ಷ ಕ್ಕಿಂತ ಹೆಚ್ಚು ಮಾನವ ದಿನಗಳ ಸೃಜನೆಯಾಗಿದೆ. ಪ್ರಸ್ತುತ ವರ್ಷ ಮುಕ್ತಾಯ ಹಂತದಲ್ಲಿರುವುದರಿಂದ ಬಾಕಿ ಉಳಿದ ಮಾನವ ದಿನಗಳನ್ನು ನಿಗದಿತ ಅವಧಿಯಲ್ಲಿ ಸೃಜನೆ ಮಾಡಬೇಕು. ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಬೇಕು ಮತ್ತು ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರಿಗೆ ನಿರಂತರವಾಗಿ ಉದ್ಯೋಗ ಒದಗಿಸಬೇಕು. ಪೂರ್ಣಗೊಳ್ಳದೇ ಇರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ನರೇಗಾ ಆದ್ಯತಾ ಕಾಮಗಾರಿಗಳ ಪೂರ್ವ ಹಂತ, ಪ್ರಗತಿ ಹಂತ ಹಾಗೂ ಮುಕ್ತಾಯವಾದ ಕಾಮಗಾರಿಗಳನ್ನು ಜಿಯೋ ಟ್ಯಾಗ್ ಮಾಡುವ ಕಾರ್ಯವನ್ನು ಕೂಡಲೇ ಪ್ರಗತಿ ಸಾಧಿಸುವಂತೆ ಅವರು ಸೂಚನೆ ನೀಡಿದರು.
ನರೇಗಾ ಯೋಜನೆಯಡಿ ಜಿಲ್ಲೆಯ ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಶೇ.60ರಷ್ಟು ಪ್ರಗತಿ ಸಾಧಿಸಲು ಕ್ರಮ ವಹಿಸಬೇಕು. ಪ್ರತಿ ಗ್ರಾಮಗಳಲ್ಲಿ ಯೋಜನೆಯ ವ್ಯಾಪಕ ಪ್ರಚಾರ ಹಮ್ಮಿಕೊಂಡು ನಮೂನೆ-6 ರಲ್ಲಿ ಕೂಲಿಕಾರ್ಮಿಕರಿಂದ ಕೆಲಸಕ್ಕಾಗಿ ಬೇಡಿಕೆ ಸಂಗ್ರಹಿಸಿ, ಮಹಿಳಾ ಕೂಲಿಕಾರರು ಉತ್ತು ವಿಶೇಷ ಚೇತನರಿಗೆ ನಿರಂತರವಾಗಿ ಉದ್ಯೋಗ ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಫಲಾನುಭವಿಗಳ ಶೌಚಾಲಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು. ಈಗಾಗಲೇ ಮುಕ್ತಾಯವಾದ ಶೌಚಾಲಯಗಳ ಜಿಯೋ ಟ್ಯಾಗಿಂಗ್ ಮಾಡುವುದು, ಪ್ರಗತಿ ಹಂತದಲ್ಲಿರುವ ವೈಯಕ್ತಿಕ ಶೌಚಾಲಯಗಳನ್ನು ತುರ್ತಾಗಿ ಪೂರ್ಣಗೊಳಿಸುವುದು, ಬೂದು ನೀರು ನಿರ್ವಹಣೆ ಕಾಮಗಾರಿಗಳ ಗ್ರಾಮವಾರು ವಿಸ್ತೃತ ಯೋಜನಾ ವರದಿಯನ್ನು(ಡಿ.ಪಿ.ಆರ್) ತಯಾರಿಸಿ ಜಿಲ್ಲಾ ಪಂಚಾಯತಿಗ ಸಲ್ಲಿಸುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮರ್ಕ ನಿರ್ವಹಣೆ ಮಾಡಬೇಕು. ಜನ-ಜಾನುವಾರುಗಳಿಗೆ ಸಾಕಷ್ಟು ನೀರನ್ನು ಪೂರೈಕೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಇದೇ ವೇಳೆ ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ)ಯ ವಸತಿ ರಹಿತರು ಸೌಲಭ್ಯಗಳನ್ನು ಪಡೆಯಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಮಾಹಿತಿಯುಳ್ಳ ವಿವಿಧ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿದರು. ಈ ಪೋಸ್ಟರ್ ಗಳನ್ನು ಗ್ರಾ.ಪಂ ಗಳಲ್ಲಿ ಅಳವಡಿಸಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಉಪಕಾರ್ಯರ್ಶಿಗಳಾದ ಡಾ. ವಿಜಯಕುಮಾರ ಆಜೂರ, ಯೋಜನಾ ನಿರ್ದೇಶಕರಾದ ಬಿ.ಎಸ್ ರಾಠೋಡ, ಜಿಲ್ಲಾ ಪಂಚಾಯತಿಯ ಎಲ್ಲ ಹಿರಿಯ ಅಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ ್ಘ ಪಂ.ರಾ), ಎಲ್ಲ ಗ್ರಾ.ಪಂ. ಗಳ ಅಭಿವೃದ್ಧಿ ಅಧಿಕಾರಿಗಳು, ಎಲ್ಲ ತಾಲೂಕು ಪಂಚಾಯತಿಗಳ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.