ನವದೆಹಲಿ 30: ವರ್ಗಾವಣೆ ಪ್ರಶ್ನಿಸಿ ಸಿಬಿಐಯ ಉಪ ಪೊಲೀಸ್ ಅಧೀಕ್ಷಕ ಎ ಕೆ ಬಸ್ಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ನ್ಯಾಯಾಲಯ ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿದೆ.
ಎ ಕೆ ಬಸ್ಸಿ ರಾಕೇಶ್ ಅಸ್ತಾನಾ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದರು.ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎ ಕೆ ಬಸ್ಸಿ, ಲಂಚ ಪ್ರಕರಣದಲ್ಲಿ ರಾಕೇಶ್ ಅಸ್ತಾನಾ ವಿರುದ್ಧ ತಮ್ಮ ಬಳಿ ದೋಷಾರೋಪಣಾ ಸಾಕ್ಷಿಗಳಿದ್ದು ತಾಂತ್ರಿಕ ಕಣ್ಗಾವಲಿಗೆ ಸಾಕ್ಷಿಗಳನ್ನು ಕರೆಯಬೇಕೆಂದು ಸಹ ನ್ಯಾಯಾಲಯವನ್ನು ಕೋರಿರುವುದಾಗಿ ತಿಳಿಸಿದ್ದಾರೆ.
ಅಸ್ತಾನಾ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಎ ಕೆ ಬಸ್ಸಿ ಅವರನ್ನು ಸಾರ್ವಜನಿಕ ಹಿತಾಸಕ್ತಿ ಕಾರಣ ನೀಡಿ ಪೋರ್ಟ್ ಬ್ಲೇರ್ ಅಂಡಮಾನ್ ಜೈಲ್ ಗೆ ವರ್ಗಾಯಿಸಲಾಗಿತ್ತು. ಈ ಹಿಂದೆ ಕೇಂದ್ರ ಜಾಗೃತ ಆಯೋಗಕ್ಕೆ ದೂರು ನೀಡಿದ್ದ ಅಸ್ತಾನಾ, ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ನಿರ್ದೇಶನದ ಮೇರೆಗೆ ಬಸ್ಸಿ ನನ್ನ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಬಸ್ಸಿ ಹಾಗೂ ಜಂಟಿ ನಿರ್ದೇಶಕ ಎ ಕೆ ಶರ್ಮ ಅವರನ್ನು ನನ್ನ ವಿರುದ್ಧ ಮಾಹಿತಿ ಸಂಗ್ರಹಿಸಲು ಗುಜರಾತ್ ಗೆ ಕಳುಹಿಸಲಾಗಿತ್ತು ಎಂದು ಆರೋಪಿಸಿದ್ದರು.