ತಿರುವನಂತಪುರಂ, ಜ 29 : ರಾಜ್ಯ ವಿಧಾನಸಭೆಯ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಆರಿಫ್ ಮುಹಮ್ಮದ್ ಅವರಿಗೆ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ತಡೆ ಒಡ್ಡಿದ ಘಟನೆ ಇಂದು ನಡೆಯಿತು.
ಸದನವು ಸರ್ವಾನುಮತದಿಂದ ಅಂಗೀಕರಿಸಿದ 'ಸಿಎಎ ವಿರೋಧಿ ನಿರ್ಣಯ'ದ ವಿರುದ್ಧ ರಾಜ್ಯಪಾಲರು ತಮ್ಮ ನಿಲುವನ್ನು ಹಿಂಪಡೆಯುವಂತೆ ಒತ್ತಾಯಿಸಿ, ಪ್ರತಿಪಕ್ಷದ ಸದಸ್ಯರು ಸದನದ ಬಾವಿಯ ಮೇಲೆ ಕುಳಿತು ರಾಜ್ಯಪಾಲರನ್ನು ಸ್ಪೀಕರ್ ವೇದಿಕೆಗೆ ಬರದಂತೆ ತಡೆಯುವ ಮೂಲಕ ಪ್ರತಿಭಟನೆ ನಡೆಸಿದರು.
ರಾಜ್ಯಪಾಲರು ಸ್ಪೀಕರ್ ಪಿ.ಶ್ರೀರಾಮಕೃಷ್ಣನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾನೂನು ಸಚಿವ ಎ.ಕೆ.ಬಾಲನ್ ಮತ್ತು ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸದನಕ್ಕೆ ಬಂದಾಗ ಘೋಷಣೆಗಳನ್ನು ಕೂಗಿದ ಪ್ರತಿಪಕ್ಷದ ಸದಸ್ಯರು ರಾಜ್ಯಪಾಲರಿಗೆ ತಡೆ ಒಡ್ಡಿದರು.
ಪ್ರತಿಪಕ್ಷದ ಸದಸ್ಯರು 10 ನಿಮಿಷಗಳಿಗೂ ಹೆಚ್ಚು ಕಾಲ 'ಹಿಂತಿರುಗಿ' ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ಮುಂದುವರೆಸಿದರು, ಆಗ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರು ವಿಧಾನಸಭೆಯ ಭದ್ರತಾ ಸಿಬ್ಬಂದಿಯನ್ನು ಕರೆಸಿ, ಪ್ರತಿಭಟನಾ ನಿರತ ಸದಸ್ಯರನ್ನು ಸದನದಿಂದ ಬಲವಂತವಾಗಿ ಹೊರಗೆ ಕಳುಹಿಸಿ ರಾಜ್ಯಪಾಲರಿಗೆ ವೇದಿಕೆಗೆ ಬರಲು ದಾರಿ ಮಾಡಿಕೊಟ್ಟರು.
ಸದನದ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ ಸಿಎಎ ವಿರೋಧಿ (ಪೌರತ್ವ ತಿದ್ದುಪಡಿ ಕಾಯ್ದೆ) ನಿರ್ಣಯವನ್ನು ಟೀಕಿಸಿದ ರಾಜ್ಯಪಾಲರ ಕ್ರಮವು ಸ್ವೀಕಾರಾರ್ಹವಲ್ಲ. ಅವರನ್ನು ರಾಷ್ಟ್ರಪತಿ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಒತ್ತಾಯಿಸಿದರು.
ಆಕ್ರೋಶಗೊಂಡ ಸದಸ್ಯರು ಘೋಷಣೆಗಳನ್ನು ಕೂಗಿ, ರಾಜ್ಯಪಾಲರ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದರು. ರಾಜ್ಯಪಾಲರು ಸಾಂಪ್ರದಾಯಿಕ ಭಾಷಣವನ್ನು ಪ್ರಾರಂಭಿಸಿದಾಗ, ಸಿಎಎ ಪರ ಅವರ ನಿಲುವನ್ನು ವಿರೋಧಿಸಿ ಪ್ರತಿಪಕ್ಷದ ಸದಸ್ಯರು ಸದನವನ್ನು ಬಹಿಷ್ಕರಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರ್‌ಎಸ್‌ಎಸ್ ಏಜೆಂಟ್ ಎಂದು ಆರೋಪಿಸಿದರು.
ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸಿಎಎ ವಿಷಯ ಬಂದಾಗ, ನಾನು ಸರ್ಕಾರದ ನಿಲುವನ್ನು ಓದುತ್ತಿದ್ದೇನೆಯೇ ಹೊರತು ಇದು ನನ್ನ ನಿಲುವಲ್ಲ, ನಾನು ಇದಕ್ಕೆ ತದ್ವಿರುದ್ಧ ನಿಲುವು ಹೊಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.