ಸತ್ಪುರುಷರ ಆಶೀರ್ವಾದದಿಂದ ಬದುಕು ಉದ್ಧಾರ: ಹಿರಿಯ ಚಿತ್ರನಟ ಶ್ರೀಧರ

ಸತ್ಪುರುಷರ ಆಶೀರ್ವಾದದಿಂದ ಬದುಕು ಉದ್ಧಾರ: ಹಿರಿಯ ಚಿತ್ರನಟ ಶ್ರೀಧರ  Life is saved by the blessings of good people: Veteran film actor Sridhar

ಲೋಕದರ್ಶನ ವರದಿ, 

ಜಮಖಂಡಿ 04: ಪವಾಡ ಪುರುಷರು ಹಾಗೂ ಸತ್ಪುರುಷರ ಆಶೀರ್ವಾದ ನಮ್ಮ ಬದುಕನ್ನು ಉದ್ಧಾರ ಮಾಡುತ್ತದೆ. ದೈವಾನುಗ್ರಹಕ್ಕಾಗಿ ನಾವು ಭಕ್ತಿಯಿಂದ ಪ್ರಾರ್ಥಿಸಬೇಕು ಎಂದು ಹಿರಿಯ ಚಿತ್ರನಟ ಶ್ರೀಧರ ಹೇಳಿದರು. ತಾಲೂಕಿನ ಮೈಗೂರ ಗ್ರಾಮದ ಗುರುದೇವಾಶ್ರಮದ ಆವರಣದಲ್ಲಿ ಶಿವಾನಂದ ಮಠದ ಜಾತ್ರಾಮಹೋತ್ಸವ ಹಾಗೂ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರ ಪುಣ್ಯಾರಾಧನೆ ನಿಮಿತ್ತ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಮೈಗೂರ ಪವಾಡ ಪುರುಷ ಪೌರಾಣಿಕ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಭಕ್ತಿಯಿಂದ ಕೇಳಿದ್ದನ್ನು ನೀಡಲು ಪರಮಾತ್ಮ ಸ್ವಲ್ಪ ವಿಳಂಬ ಮಾಡಬಹುದು, ಆದರೆ ಸದ್ಗುರುಗಳು ಎಂದಿಗೂ ವಿಳಂಬ ಮಾಡುವುದಿಲ್ಲ. ಭಕ್ತರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಶಕ್ತಿ ಮಹಾಗುರುಗಳಿಗಿದೆ. ಮನುಷ್ಯ ಜನ್ಮ ಪಡೆಯುವುದೇ ದೊಡ್ಡ ಪುಣ್ಯ. ಅಂತಹ ಪುಣ್ಯದ ಫಲವಾಗಿ ನಮಗೆ ಮಹಾಪುರುಷರ ಸನ್ನಿಧಿಯಲ್ಲಿ ಇರುವ ಭಾಗ್ಯ ಸಿಗುತ್ತದೆ. ಜೀವನದ ಕಷ್ಟ-ನೋವುಗಳನ್ನು ನಿವಾರಿಸುವ ಸಾಮರ್ಥ್ಯ ಸತ್ಪುರುಷರಿಗಿದೆ ಎಂದರು. ಹಿರಿಯ ನಟಿಯರಾದ ಅನು ಪ್ರಭಾಕರ್ ಮತ್ತು ಭವ್ಯಾ ಮಾತನಾಡಿ, ಪವಾಡ ಪುರುಷರು ನಡೆದಾಡಿದ ನೆಲವೇ ಪುಣ್ಯಕ್ಷೇತ್ರವಾಗಿದೆ ಎಂದರು. 

ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ, ಬಾಲ್ಕಿಯ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಗ್ರಾಮದ ಹಿರಿಯ ಪರ​‍್ಪ ಕಕಮರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರಿನ ಪಿಎಸ್‌ಐ ಕುಮಾರ ಮೂಕನವರ, ಮಲ್ಲು ಬಿ. ಪಾಟೀಲ, ಸಂಜು ಖೋತ, ಮುತ್ತಣ್ಣ ಮೂಕನವರ, ಭೂಪಾಲ ಸದಲಗಿ, ರಾಜೇಶ್ವರಿ ಹಿರೇಮಠ, ರಾಮ ಅಂಬಿ, ಅಡವಯ್ಯ ಹಿರೇಮಠ, ಮಹಾದೇವ ಭೀಮನಹಳ್ಳಿ, ಧರನೇಶ ನ್ಯಾಮಗೌಡ, ಶಿವಪ್ರಭು ಭೀಮನಹಳ್ಳಿ ಸಂಗೊಳ್ಳಿ ಮಠಪತಿ ಇತರರು ಇದ್ದರು.ಶಿಕ್ಷಕ ಅಪ್ಪು ಅಂಬಿ ಸ್ವಾಗತಿಸಿದರು, ಶಿಕ್ಷಕ ಎಂ.ಡಿ. ತೇಲಸಂಗ ನಿರೂಪಿಸಿದರು.