ಕಾಲೇಜುಗಳಲ್ಲಿ ಸಿಎಎ ಬಗ್ಗೆ ತಿಳಿಸುವಂತಾಗಬೇಕು- ಡಾ.ಸಿ.ಎನ್.ಅಶ್ವಥ್ ನಾರಾಯಣ್

ಬೆಂಗಳೂರು,  ಜ 9              ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸುವಂತಾಗಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದ್ದಾರೆ. 

ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಜಾಗೃತಿ ಮೂಡಿಸಲು ತೆರಳಿದ್ದ ಬಿಜೆಪಿ ಕಾರ್ಯಕರ್ತರನ್ನು ಅಡ್ಡಿಪಡಿಸಿ, ನಿಂದಿಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ನಿಯೋಗ ಗುರುವಾರ ತಮ್ಮನ್ನು ಭೇಟಿ ಮಾಡಿ ಸಲ್ಲಿಸಿದ ದೂರನ್ನು ಸ್ವೀಕರಿಸಿ ಮಾತನಾಡಿದ ಅವರು,  ಜ್ಯೋತಿ ನಿವಾಸ ಕಾಲೇಜು ಬಳಿ ಬಿಜೆಪಿ ಕಾರ್ಯಕರ್ತರು ಸಿಎಎ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವೇಳೆ ಕೆಲವರು ಅಡ್ಡಿ ಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ ಕಾನೂನು ಉಲ್ಲಂಘನೆಯಾಗಿಲ್ಲ. ಆದರೆ, ಈ ವಿಷಯವನ್ನು ಬೇರೆಡೆ ತಿರುಚಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿವೆ. ಬಿಜೆಪಿ ಕಾರ್ಯಕರ್ತರು ಕಾನೂನು ಉಲ್ಲಂಘಿಸಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ಆದರೆ ಕೆಲ ಶಕ್ತಿಗಳ ಕುಮ್ಮಕ್ಕಿನಿಂದ ವಿದ್ಯಾರ್ಥಿ ನಿಯರ ಒಂದು ಗುಂಪು ಕಾರ್ಯಕರ್ತರನ್ನು ನಿಂದಿಸಿದೆ. ಕಾಲೇಜುಗಳಲ್ಲಿ ಸಿಎಎ ಜಾಗೃತಿಗೆ ಅಡ್ಡಪಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.  

ಸಿಎಎ ಬಗ್ಗೆ ದೇಶವ್ಯಾಪಿ ಅಪಪ್ರಚಾರ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ಕಾಯ್ದೆಯನ್ನು ವಿರೋಧಿಸಲಾಗುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಿರುವವರು ಹೇಳುತ್ತಿಲ್ಲ. ಇಂತಹ ಪ್ರಯತ್ನಗಳು ಮತ್ತು ಷಡ್ಯಂತ್ರ ಮಾಡುತ್ತಿರುವ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಕಾಯ್ದೆಯು ಯಾವುದೇ ಧರ್ಮದ ವಿರುದ್ಧವಿಲ್ಲ. ಮಾನವೀಯತೆಯ ಈ ಕಾನೂನು ಬಗ್ಗೆ ವ್ಯಾಪಕ ಜಾಗೃತಿಯಾಗಬೇಕಿದೆ. ಈ ನಿಟ್ಟಿನಲ್ಲಿ ಕಾಲೇಜುಗಳು ಸಹ ಕಾನೂನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಮಾಹಿತಿ ಕೊರತೆಯನ್ನು ದುರ್ಬಳಕೆ ಮಾಡಿಕೊಂಡು ಕೆಲ ಕಿಡಿಗೇಡಿಗಳು  ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕಾನೂನನ್ನು ಎಲ್ಲರೂ ಗೌರವಿಸಲೇಬೇಕು. ರಾಜಕೀಯ ದುರುದ್ದೇಶದಿಂದ ಮಾನವೀಯತೆಯ ಈ ಕಾನೂನು ಬಗ್ಗೆ ಅಪಪ್ರಚಾರ ನಡೆಸುವುದು ದೇಶದ್ರೋಹದ ಕೆಲಸ ಎಂದು ಅವರು ಹೇಳಿದರು.