ದೇಶದೆಲ್ಲೆಡೆ ಸಿಎಎ ವಿರುದ್ಧ ಆಕ್ರೋಶ, ದೆಹಲಿಯಲ್ಲಿ ಯೋಗೇಂದ್ರ ಯಾದವ್ , ಬೆಂಗಳೂರಿನಲ್ಲಿ ರಾಮಚಂದ್ರ ಗುಹಾ ವಶಕ್ಕೆ

ನವದೆಹಲಿ,  ಡಿ  ೧೯ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ  ದೊಡ್ಡ  ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ.  ಪ್ರತಿಭಟನಾಕಾರರ  ನಿಯಂತ್ರಣಕ್ಕೆ  ದೇಶದ ಹಲವು ಭಾಗಗಳಲ್ಲಿ ೧೪೪  ಸೆಕ್ಷನ್ ಅಡಿ ನಿಷೇಧಾಜ್ಞೆ  ಜಾರಿಗೊಳಿಸಲಾಗಿದೆ. ಭಾರಿ ಸಂಖ್ಯೆಯ ಪೊಲೀಸರನ್ನು  ನಿಯೋಜಿಸಿ ಭದ್ರತೆಯನ್ನು  ಬಿಗಿಗೊಳಿಸಲಾಗಿದೆ.  ಆದರೂ ಪ್ರತಿಭಟನಾಕಾರರು,  ಹಲವು ಬುದ್ದಿಜೀವಿಗಳು, ರಾಜಕೀಯ ನಾಯಕರು ಬೀದಿಗಿಳಿದು ಸಿಎಎ ವಿರುದ್ಧ    ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಕೆಂಪು ಕೋಟೆ ಬಳಿ  ಭಾರಿ ಸಂಖ್ಯೆಯ ಪ್ರತಿಭಟನಾಕಾರರು  ಜಮಾಯಿಸಿದ್ದರಿಂದ  ಉದ್ರಿಕ್ತ ಪರಿಸ್ಥಿತಿ  ನಿರ್ಮಾಣಗೊಂಡಿತು. ಸಾವಿರಾರು ಪ್ರತಿಭಟನಾಕಾರರನ್ನು ಸ್ಥಳದಿಂದ  ಚದುರಿಸಲು ಪೊಲೀಸರು ಪ್ರಯತ್ನಿಸಿದರು.  ಈ ಸಂದರ್ಭದಲ್ಲಿ  ಸ್ವರಾಜ್  ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್   ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡೊಯ್ದರು. ಈ ಸಂದರ್ಭದಲ್ಲಿ ಯೋಗೇಂದ್ರ ಯಾದವ್ ’ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರು.ಪೌರತ್ವ  ತಿದ್ದುಪಡಿ  ಕಾಯ್ದೆಯ  ವಿರುದ್ಧ  ಬೃಹತ್   ಪ್ರಮಾಣದ ಪ್ರತಿಭಟನೆಗಳು ಭುಗಿಲೆದ್ದಿದ್ದರಿಂದ ಪೊಲೀಸರು ದೆಹಲಿ-ಗುರುಗ್ರಾಮ್ ಹೆದ್ದಾರಿಯಲ್ಲಿ ಬ್ಯಾರಿಕೇಡ್  ಅಳವಡಿಸಿ  ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಇದರಿಂದಾಗಿ ಸುಮಾರು ೫ ಕಿ.ಮೀವರೆಗೆ  ವಾಹನಗಳು ಸಾಲುಗಟ್ಟಿ ನಿಂತಿವೆ.  ಅಲ್ಲದೆ  ದೆಹಲಿಯ  ಹಲವು ಭಾಗಗಳಲ್ಲಿ, ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ೧೬ ಮೆಟ್ರೋ ನಿಲ್ದಾಣಗಳ  ಬಾಗಿಲು ಮುಚ್ಚಲಾಗಿದೆ. ಮತ್ತೊಂದೆಡೆ, ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರಸಿದ್ಧ ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು ಬೆಂಗಳೂರು ಟೌನ್ ಹಾಲ್ ಬಳಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಿಎಎ ಕುರಿತು ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ,  ಪೊಲೀಸರು  ಅವರನ್ನು  ವಶಕ್ಕೆ ಪಡೆದುಕೊಂಡರು. ಸಿಎಎ ವಿರುದ್ಧ  ತೆಲಂಗಾಣದ ಚಾರ್ಮಿನಾರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವಾರು ಪ್ರತಿಭಟನಾಕಾರರನ್ನು ಪೊಲೀಸರು  ಅಲ್ಲಿಂದ ಚದುರಿಸದರು. ಸಿಎಎ ಮತ್ತು ಎನ್‌ಎಆರ್‌ಸಿ ವಿರುದ್ಧ ಪ್ರತಿಭಟಿಸುತ್ತಿದ್ದ ಹಲವಾರು ವಿದ್ಯಾರ್ಥಿಗಳನ್ನು ಹೈದರಾಬಾದ್‌ನ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.