ಬೀದರ್, ಜ 31- ಶಾಹೀನ್ ಎಜುಕೇಶನ್ ಸೊಸೈಟಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿಯನ್ನು ಮತ್ತು ಶಹೀನ್ ಪ್ರಾಥಮಿಕ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಟಕ ಪ್ರದರ್ಶಿಸಿದ ಮಗುವಿನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಾಹೀನ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಫರೀದಾ ಬೇಗಂ ಮತ್ತು ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ತಾಯಿ ಅನುಜಾ ಮಿನ್ಸಾ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ತನಿಖಾ ಅಧಿಕಾರಿ ಮತ್ತು ಡಿಎಸ್ಪಿ ಬಸವೇಶ್ವರ ಹಿರಾ ಮಾಹಿತಿ ನೀಡಿದ್ದಾರೆ.
ಶಾಲೆಯ ನಾಲ್ಕನೇ, ಐದನೇ ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಾಟಕವನ್ನು ಪ್ರದರ್ಶಿಸಿದ್ದಾರೆ. ಆದರೆ, ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕಾಣಿಸಿಕೊಂಡಿಲ್ಲ.ವಿಚಾರಣೆ ವೇಳೆ, ನಾಟಕದ ಅಭ್ಯಾಸದ ವೇಳೆ ಮಗಳಿಗೆ ಸಂಭಾಷಣೆ ಹೇಳಿಕೊಟ್ಟಿದ್ದಾಗಿ ಅನುಜಾ ಹೇಳಿದ್ದಾರೆ.
ಶಾಹೀನ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಅಬ್ದುಲ್ ಖದೀರ್ ಹೈದರಾಬಾದ್‌ನಲ್ಲಿ ಇದ್ದಾರೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಸಾಮಾಜಿಕ ಕಾರ್ಯಕರ್ತ ನಿಲೇಶ್ ರಕ್ಷಾಲ್ ಅವರ ದೂರಿನ ಮೇರೆಗೆ ಜನವರಿ 26 ರಂದು ನ್ಯೂ ಟೌನ್ ಪೊಲೀಸರಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ..