ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಿಎಎ, ಮೇಯರ್‌ ಮೇಲಿನ ದಾಳಿ ಪ್ರಸ್ತಾಪಿಸಿ ಬಿಜೆಪಿಯಿಂದ ಗದ್ದಲ

ನಾಗ್ಪುರ, ಡಿ. 18 ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ವಿಧಾನಸಭೆಯ ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಇಂದು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.ಸದನದ ಕಲಾಪ ಆರಂಭಗೊಳ್ಳುತ್ತಿದ್ದಂತೆ, ಬಿಜೆಪಿ ಮುಖಂಡ ಸುಧೀರ್ ಮುಂಗಟ್ಟಿವಾರ್ ಅವರು, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪ್ರಸ್ತಾಪಿಸಿ,  ನಾಗ್ಪುರ ಮೇಯರ್ ಸಂದೀಪ್ ಜೋಶಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿ ಕಳೆದ ರಾತ್ರಿ ಹಿಂದಿರುಗುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದೆ ಎಂದು ದೂರಿದರು.ಮಂಗಳವಾರ ಮಧ್ಯರಾತ್ರಿ ಇಲ್ಲಿನ ವಾರ್ಧಾ ರಸ್ತೆಯಲ್ಲಿ ಮೋಟಾರ್‌ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು  ಜೋಶಿ ಅವರ ಕಾರಿಗೆ ಗುಂಡು ಹಾರಿಸಿದಾಗ ಅವರು ಸ್ಪಲ್ಪದರಲ್ಲೇ ಪಾರಾಗಿದ್ದಾರೆ. ಜೋಶಿ ಚಲಾಯಿಸುತ್ತಿದ್ದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ನ ಗಾಜಿನ ಕಿಟಕಿಗಳು ಮತ್ತು ಹಿಂಭಾಗದ ಗಾಜುಗಳಿಗೆ ಮೂರು ಗುಂಡುಗಳು ಅಪ್ಪಳಿಸಿವೆ. ಆದರೆ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು.ನಗರದಲ್ಲಿ ನಾಗ್ಪುರದ ಪ್ರಥಮ ಪ್ರಜೆಯ ಮೇಲೆ ಹಲ್ಲೆ ನಡೆದಿರುವುದು ಗಂಭೀರ ವಿಷಯ ಎಂದು ಹೇಳಿದ ಮುಂಗಟ್ಟಿವಾರ್, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಪ್ರತಿಪಕ್ಷಗಳು ಯಾವಾಗಲೂ ಪೂರ್ಣ ಪ್ರಮಾಣದ ಗೃಹ ಸಚಿವರನ್ನು ನೇಮಿಸುವಂತೆ ಒತ್ತಾಯಿಸುತ್ತಿದ್ದವು. ಆದರೆ, ಪ್ರಸ್ತುತ ಸರ್ಕಾರ ಇನ್ನೂ ಪೂರ್ಣಾವಧಿಯ ಗೃಹ ಸಚಿವರನ್ನು ನೇಮಿಸಿಲ್ಲ ಎಂದು ಟೀಕಿಸಿದರು.ನಂತರ, ಪ್ರತಿಪಕ್ಷದ ಸದಸ್ಯರು ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಷಯವನ್ನು ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗದ್ದವವೇರ್ಪಡಿಸಿದರು.ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ನಾನಾ ಪಟೋಲ್ ಅವರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.