ಸಿಎಎ: ಸುಪ್ರೀಂ ತೀರ್ಪು ಬರುವವರೆಗೆ ಸಂಯಮ ಕಾಪಾಡಿ – ನಿತೀಶ್ ಕುಮಾರ್

ಪಾಟ್ನಾ, ಜ 28 :       ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅಂತಿಮವಾಗಿ ಸುಪ್ರೀಂಕೋರ್ಟ್ ಕೇಂದ್ರದ ಕ್ರಮದ ಬಗ್ಗೆ ಸ್ಪಷ್ಟ ತೀರ್ಮಾನ ಪ್ರಕಟಿಸುವವರೆಗೆ ದೇಶದ ಜನತೆ ತಾಳ್ಮೆ , ಸಂಯಮ ಕಾಪಾಡಿಕೊಂಡು ಬರಬೇಕು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಉದ್ದಗಲಕ್ಕೂ ಪ್ರತಿಭಟನೆ ವ್ಯಾಪಕವಾಗಿ ಹಬ್ಬುತ್ತಿರುವ ಸನ್ನಿವೇಶದಲ್ಲಿ ಅವರ ಈ ಹೇಳಿಕೆ ರಾಜಕೀಯವಾಗಿ ಬಹಳ ಮಹತ್ವ ಪಡೆದುಕೊಂಡಿದೆ. 

ನಿತೀಶ್ ಕುಮಾರ್ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಮುಖಂಡರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದರು.

ಸಿಎಎ ಕುರಿತ ಅಭಿಪ್ರಾಯದಲ್ಲಿನ ವ್ಯತ್ಯಾಸವು ಈಗ ದೇಶದ ವಿವಿಧ ಮೂಲೆಗಳಲ್ಲಿ ಗೋಚರಿಸುತ್ತಿದೆ ಆದರೆ ಈ ವಿಷಯ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಕಾರಣ ಜನತೆ ಅಂತಿಮ ತೀರ್ಪು ಏನು ಬರುತ್ತದೆ ಎಂಬುದನ್ನು ಕಾದುನೋಡುವುದು ಒಳ್ಳೇಯ ಬೆಳವಣಿಗೆ ಎಂದರು.

ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಜನರಿಗೆ ತಮ್ಮದೇ ಆದ ಆಕ್ಷೇಪಣೆ, ಅನುಮಾನ, ತಕರಾರು ಇದ್ದಲ್ಲಿ ಅದನ್ನು ಸುಪ್ರೀಂ ಕೋರ್ಟ್‌ ಮುಂದೆ ಪ್ರಸ್ತಾಪ ಮಾಡುವ ಅಧಿಕಾರ ಮತ್ತು ಸ್ವಾತಂತ್ರ್ಯ ಇದೆ ಎಂದು ಪ್ರತಿಪಾದಿಸಿದರು.

ಈಗಾಗಲೇ ಕೇರಳ ಸೇರಿದಂತೆ ಹಲವು ರಾಜ್ಯಗಳು ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿವೆ. ಅದರಲ್ಲೂ ವಿಶೇಷವಾಗಿ ಕೇಂದ್ರದ ವಿರುದ್ಧ ಸೆಟೆದು ನಿಂತಿರುವ ಕೇರಳ ಸರ್ಕಾರ ವಿಧಾನಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ.

ಕಾಯಿದೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ. ಕಾಯಿದೆಯನ್ನು ವಿರೋಧಿಸಿ ರಾಜ್ಯಗಳ ವಿಧಾನಮಂಡಲಗಳಲ್ಲಿ ನಿರ್ಣಯ ತೆಗೆದುಕೊಳ್ಳಬಹುದು. ಜನರು ಬೀದಿಗಳಲ್ಲಿ ಪ್ರತಿಭಟಿಸಲೂಬಹುದು. ಆದರೆ ಕೇಂದ್ರದ ಪೌರತ್ವ ಕಾಯಿದೆಗೆ ಸಂವಿಧಾನದ ಮಾನ್ಯತೆ ಇದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟರೆ ತೀರ್ಪು ನೀಡಿದರೆ ಆಗ ರಾಜ್ಯಗಳಿಗೆ ಇದನ್ನು ಜಾರಿಗೊಳಿಸದೇ ಬೇರೆ, ಪರ್ಯಾಯ ಮಾರ್ಗ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ , ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್  ಹಾಗೂ ಇದೇ ರೀತಿಯ ಅಭಿಪ್ರಾಯವನ್ನು ಕೇರಳದ ಸಂಸದರೇ ಆಗಿರುವ ಶಶಿತರೂರ್ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಸಿದ್ಧಪಡಿಸುವ ಪ್ರಶ್ನೆಯೇ ಇಲ್ಲ ಎಂದು ನಿತೀಶ್ ಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.