ನವದೆಹಲಿ, ಫೆ.3,ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ವಿರೋಧ ಪಕ್ಷಗಳು ಸೋಮವಾರ ಪ್ರತಿಭಟನೆ ನಡೆಸಿ ಭಾರೀ ಗದ್ದಲ, ಕೋಲಾಹಲವೆಬ್ಬಿಸಿದ್ದರಿಂದ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನದವರೆಗೆ ಎರಡು ಬಾರಿ ಮುಂದೂಡಬೇಕಾದ ಪ್ರಸಂಗ ನಡೆಯಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಮೊದಲ ಬಾರಿಗೆ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಲಾಯಿತು. ಮತ್ತೆ ಮಧ್ಯಾಹ್ನ 12 ಗಂಟೆಗೆ ಕಲಾಪ ಆರಂಭಗೊಂಡಾಗಲೂ, ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತದ ಪ್ರತಿಭಟನೆಗಳ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಎದ್ದು ನಿಂತು ಒತ್ತಾಯ ಮಾಡಿದರು.ನಿಯಮ 267 ರ ಅಡಿಯಲ್ಲಿ ಚರ್ಚಿಸಲು ವಿರೋಧ ಪಕ್ಷಗಳು ನೀಡಿದ್ದ ನೋಟಿಸ್‌ಗಳನ್ನು ಸಭಾಪತಿಯವರು ತಿರಸ್ಕರಿಸಿದ್ದಾರೆ. ಆದ್ದರಿಂದ ಈ ವಿಷಯವನ್ನು ಪ್ರಸ್ತಾಪಿಸಲು ಅನುಮತಿಸುವುದಿಲ್ಲ ಎಂದು ಉಪ ಸಭಾಪತಿ ಹರಿವಂಶ ಸ್ಪಷ್ಟಪಡಿಸಿದರು.
ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರು ಈ ವಿಷಯದ ಬಗ್ಗೆ ಮಾತನಾಡಲು ಮುಂದಾದರು. ಆದರೆ ಅವರಿಗೂ ಉಪ ಸಭಾಪತಿ ಅನುಮತಿ ನೀಡಲಿಲ್ಲ. ಮಾತ್ರವಲ್ಲ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಆದರೆ, ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.ಇದಕ್ಕೂ ಮೊದಲು ವಿಪಕ್ಷಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶೂನ್ಯವೇಳೆಯಲ್ಲಿ ಕಲಾಪವನ್ನು ಮುಂದೂಡಲಾಗಿತ್ತು. ಬೆಳಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕೆಲವು ಸದಸ್ಯರು ಎನ್‌ಆರ್‌ಸಿ, ಎನ್‌ಪಿಆರ್ ಸಮಸ್ಯೆಯನ್ನು 267 ನಿಯಮದಡಿ ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆದರೆ ಸಭಾಪತಿ ಎಂ.ವೆಂಕಯ್ಯನಾಯ್ಡು ಅವಕಾಶ ನಿರಾಕರಿಸಿ, ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಿದ್ದರು.