ಸಿಎಎ: ನಡ್ಡಾ ಅಧ್ಯಕ್ಷತೆಯಲ್ಲಿ ಬಿಜೆಪಿ ಪ್ರಮುಖರು, ಕೇಂದ್ರ ಸಚಿವರ ಮಹತ್ವದ ಸಭೆ

ನವದೆಹಲಿ, ಡಿ 26, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಪ್ರತಿಪಕ್ಷಗಳು ಪ್ರತಿಭಟನೆಗಳನ್ನು ಮುಂದುವರೆಸಿರುವ ನಡುವೆಯೇ ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಅವರು ಗುರುವಾರ ಪಕ್ಷದ ಪ್ರಮುಖ ನಾಯಕರು ಹಾಗೂ ಕೇಂದ್ರ ಸಚಿವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಪ್ರತಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಮಾಡುತ್ತಿರುವ ಟೀಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಅರುಣಾಚಲ ಪ್ರದೇಶ ಸಂಸದರು ಹಾಗೂ ಕೇಂದ್ರ ಸಚಿವರಾದ ಕಿರಣ್ ರಿಜಿಜು ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಉಪಸ್ಥಿತರಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯು ಮುಸ್ಲೀಮರಿಗೆ ತಾರತಮ್ಯ ತೋರುತ್ತದೆ ಎಂದು ವಾಗ್ದಾಳಿ ನಡೆಸಲಾಗುತ್ತಿದೆ. ಹೊಸ ಕಾನೂನು ವಿರುದ್ಧದ ಪ್ರತಿಭಟನೆಗಳಿಗೆ ಈಶಾನ್ಯ ಪ್ರಾಂತ್ಯ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಕಾಯ್ದೆಯಿಂದ ಮುಸ್ಲೀಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಸಂದೇಶವನ್ನು ತಲುಪಿಸಲು ಕಳೆದ ಕೆಲ ದಿನಗಳಿಂದ ನಖ್ವಿ ಮತ್ತು ಕೆಲ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವರಾದ ಅರ್ಜುನ್‍ರಾಮ್ ಮೇಘ್‍ವಾಲ್, ಅನುರಾಗ್ ಠಾಕುರ್, ಸಂಸದ ರಾಜೀವ್ ಚಂದ್ರಶೇಖರ್ ಸಹ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.