2022ರ ವೇಳೆಗೆ ಬ್ರೆಜಿಲ್ ನೊಂದಿಗಿನ ವಹಿವಾಟು 15 ಬಿಲಿಯನ್ ಅಮೆರಿಕನ್ ಡಾಲರ್ ಗೆ ಹೆಚ್ಚಳ

ನವದೆಹಲಿ, ಜ 27:            ಸಂಪೂರ್ಣ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದಲ್ಲಿ ಬ್ರೆಜಿಲ್ ಭಾರತದ ಪ್ರಮುಖ ಪಾಲುದಾರ ಸಂಸ್ಥೆಯಾಗಿದ್ದು, 2022ರ ವೇಳೆಗೆ ಉಭಯ ರಾಷ್ಟ್ರಗಳ ನಡುವಿನ ವಹಿವಾಟು 15 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆಯಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರು ಭಾರತಕ್ಕೆ ಭೇಟಿ ನೀಡಿದ ವೇಳೆ ಅವರೊಂದಿಗೆ 15 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. ಇದು ಉಭಯ ರಾಷ್ಟ್ರಗಳ ನಡುವಿನ ಹೂಡಿಕೆ, ವ್ಯಾಪಾರ ಸೌಲಭ್ಯ, ಸಾಮಾಜಿಕ ಭದ್ರತೆ, ಕೃಷಿ, ರಕ್ಷಣೆ ಮತ್ತು ದುಪ್ಪಟ್ಟು ತೆರಿಗೆಗೆ ಪ್ರೋತ್ಸಾಹ ನೀಡಲಿದೆ ಎಂದರು. 

ಮುಂದಿನ ದಿನಗಳಲ್ಲಿ ಸ್ವಚ್ಛ ಇಂಧನ, ಸ್ಟಾರ್ಟ್ ಅಪ್ ಗಳೂ, ರೈಲ್ವೆ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಾಗಲಿದ್ದು, ಭಾರತ ಮತ್ತು ಬ್ರೆಜಿಲ್ ನಡುವೆ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಪಿಯೂಷ್ ಗೋಯಲ್ ಭರವಸೆ ವ್ಯಕ್ತಪಡಿಸಿದೆ. 

2024ರಷ್ಟರಲ್ಲಿ ಭಾರತೀಯ ರೈಲ್ವೆಯನ್ನು ಸಂಪೂರ್ಣ ವಿದ್ಯುದೀಕರಣಗೊಳಿಸಲಾಗುವುದು ಮತ್ತು 2030ರೊಳಗೆ ಭಾರತೀಯ ರೈಲ್ವೆ ಸಂಪರ್ಕ ಸಂಪೂರ್ಣವಾಗಿ ಶೂನ್ಯ ಹೊಗೆಯುಗುಳುವ ಸ್ವಚ್ಛ ಇಂಧನದಿಂದ ಸಂಚರಿಸಲಿದೆ ಎಂದರು. 

ಭಾರತ ಹಾಗೂ ಬ್ರೆಜಿಲ್ ನಡುವಿನ ವೀಸಾ ಮುಕ್ತ ಪ್ರಯಾಣದ ಕುರಿತು ಅಲ್ಲಿನ ಅಧ್ಯಕ್ಷರು ಮಾಡಿದ ಘೋಷಣೆಯನ್ನು ಪಿಯೂಷ್ ಗೋಯಲ್ ಸ್ವಾಗತಿಸಿದರು.