ಹಣಕ್ಕಾಗಿ ಪೀಡನೆ: ರಕ್ಷಣೆಗೆ ಮನವಿ

ಲೋಕದರ್ಶನ ವರದಿ

ಗಂಗಾವತಿ 02: ಕನರ್ಾಟಕ ವಿಜಯಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಪ್ಪ ರಾಠೋಡ್ ಜಂಗ್ಲಿ ಎಂಬುವವರು ಹಣಕ್ಕಾಗಿ ತಮ್ಮನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾನೆ. ಇವನಿಂದ ತಮಗೆ ರಕ್ಷಣೆ ನೀಡಬೇಕು ಎಂದು ತಾಲೂಕಿನ ವೆಂಕಟಗಿರಿ ಗ್ರಾಮದ ಸ್ವಯಂ ಉದ್ಯೋಗ ಇಟ್ಟಂಗಿ ತಯಾರಕರ ಸಂಘದ ಪದಾಧಿಕಾರಿಗಳು ಸೋಮವಾರ ಶಾಸಕ ಪರಣ್ಣ ಮುನವಳ್ಳಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಲಿಂಗಪ್ಪ ಕಂಬಳಿ, ವೆಂಕಟಗಿರಿ  ಹೋಬಳಿಯ ಬಸಾಪಟ್ಟಣ, ದಾಸನಾಳ, ಆರ್ಹಾಳ, ವಡ್ಡರಹಟ್ಟಿಮ ಗುಡ್ಡದಕ್ಯಾಂಪ್, ಗದ್ವಾಲಕ್ಯಾಂಪ್, ಬಂಡ್ರಾಳ ಮತ್ತು ಗಡ್ಡಿ ಗ್ರಾಮಸ್ಥರು ಮತ್ತು ಕೂಲಿಕಾರರು ಸೇರಿಕೊಂಡು ಇಟ್ಟಂಗಿ ಭಟ್ಟಿ ಹಾಕಿ ಇಟ್ಟಂಗಿ ತಯಾರಿಸಿ ನಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಕಳೆದ 60 ವರ್ಷಗಳಿಂದ ಈ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದು ಕೂಲಿಕಾರರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ.

ಇಷ್ಟು ವರ್ಷಗಳ ಕಾಲ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆವು. ಸಕಾಲಕ್ಕೆ ಮಳೆಯಾಗದ ಕಾರಣ ಭೀಕರ ಬರಗಾಲದಿಂದ ಕೃಷಿಯಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಗುಳೆ ಹೋಗದೆ ಬೇರೆ ದಾರಿ ಇಲ್ಲದೆ ಈ ಸ್ವಯಂ ಉದ್ಯೋಗ ಮಾಡುತ್ತಿದ್ದೇವೆ.

ಹಣಕ್ಕೆ ಒತ್ತಾಯ: ಲಕ್ಷ್ಮಪ್ಪ ರಾಠೋಡ ಜಂಗಲಿಯವರು ವಿನಾಕಾರಣ ತೊಂದರೆ ಕೊಡುತ್ತಿದ್ದಾನೆ. ಇಟ್ಟಂಗಿ ಭಟ್ಟಿಗಳು ಕಾನೂನುಬಾಹಿರವಾಗಿದೆ. ಧೂಳಿನಿಂದ ಪರಿಸರ ನಾಶ ಹೊಂದುತ್ತಿದೆ. ಅನುಮತಿ ಹೊಂದಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ನಮ್ಮನ್ನು ಹೆದರಿಸಿ ಲಕ್ಷಾಂತರ ರೂ. ಹಣಕ್ಕಾಗಿ ನಮ್ಮನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾನೆ. ಹಣ ನೀಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ ಇಟ್ಟಂಗಿ ಭಟ್ಟಿಗಳನ್ನು ಕಿತ್ತು ಹಾಕಿಸುತ್ತೇನೆ ಎಂಬ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಅವರು ಹೇಳಿದರು.

ತಾಲೂಕಿನ ಆನೆಗುಂದಿ ಬಳಿ ಜಂಗಲಿ ಎಂಬ ಗ್ರಾಮ ನಿವಾಸಿಯಾಗಿರುವ ಲಕ್ಷ್ಮಪ್ಪ ರಾಠೋಡ ಇಲ್ಲಿಗೆ ಬಂದು ತೊಂದರೆ ನೀಡುತ್ತಿದ್ದಾನೆ. ಆದರೆ ನಮ್ಮ ಗ್ರಾಮದ ಸಾರ್ವಜನಿಕರಿಂದ ಇಟ್ಟಂಗಿ ಭಟ್ಟಿಗೆ ತೊಂದರೆ ಉಂಟಾಗಿಲ್ಲ ಎಂದು ತಿಳಿಸಿದರು.

ತಮ್ಮ ಸಂಘಟನೆಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಾಹನ ಸೌಕರ್ಯ ಕಲ್ಪಿಸಿ ಹಣ ನೀಡಲು ಲಕ್ಷ್ಮಣ ರಾಠೋಡ ಧಮಕಿ ಹಾಕಿದ್ದಾನೆ. ಸಂಘಟನೆ ಹೆಸರಿನಲ್ಲಿ ದಂಧೆ ಮಾಡುತ್ತಿರುವ ಇವನಿಂದ ನಮಗೆ ರಕ್ಷಣೆ ಒದಗಿಸಲು ಕ್ರಮ ಜರುಗಿಸಬೇಕು ಎಂದು ಅವರು ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಭಾಷಾಸಾಬ, ಕಾರ್ಯದಶರ್ಿ ಮುದಿಮಲ್ಲಪ್ಪ, ಖಜಾಂಚಿ ಶರಣಪ್ಪ ಮೇಟಿ ಪಾಲ್ಗೊಂಡಿದ್ದರು.

ಶಾಸಕರ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಮುನವಳ್ಳಿ ಸಂಘಟನೆ ಹೆಸರಿನಲ್ಲಿ ಧಮಕಿ ಹಾಕುತ್ತಿರುವ ಪುಂಡನ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡುವದಾಗಿ ಭರವಸೆ ನೀಡಿದರು.