ಬೆಂಗಳೂರು, ಡಿ.19: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ಭುಗಿಲೇಳುತ್ತಿದೆ. ಪ್ರತಿಭಟನಕಾರರನ್ನು ಹತ್ತಿಕ್ಕಲು ಕೇಂದ್ರ-ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ದಮನಕಾರಿ ನೀತಿಯನ್ನು ಅನುಸರಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಿಷೇಧಾಜ್ಞೆ, ಕರ್ಪ್ಯೂ ಹೇರುವ ಮೂಲಕ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸಲಾಗುತ್ತಿದೆ. ಜನಸಾಮಾನ್ಯರು ಭಯ ಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ. ರಾಜ್ಯದ ಮಂಗಳೂರು, ಕಲ್ಬುರ್ಗಿ ಸೇರಿದಂತೆ ದೇಶದ ಹಲವೆಡೆ 'ಕಂಡಲ್ಲಿ ಗುಂಡಿಕ್ಕುವ' ಆತಂಕದಲ್ಲಿ ಜನತೆ ಕಂಗಾಲಾಗಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಹಿಂಸಾತ್ಮಕ ಪ್ರತಿಭಟನೆ ಜನರ ಅಸ್ತ್ರ. ಶಾಂತಿಯುತ ಪ್ರತಿಭಟನೆಯನ್ನೂ ಅರಗಿಸಿಕೊಳ್ಳಲಾಗದ ಕೇಂದ್ರ-ರಾಜ್ಯ ಸರ್ಕಾರಗಳು ಪೊಲೀಸ್ ಬಲಪ್ರಯೋಗದ ಮೂಲಕ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿಮರ್ಿಸತೊಡಗಿರುವುದು ದೊಡ್ಡ ದುರಂತ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕೇಂದ್ರ-ರಾಜ್ಯ ಸರ್ಕಾರಗಳು ಪ್ರತಿಭಟನೆಗೆ ನಿರ್ಬಂಧ ಹೇರ ತೊಡಗಿರುವುದು ತುರ್ತು ಪರಿಸ್ಥಿತಿಯ ಮುನ್ಸೂಚನೆ ಎಂಬಂತಿದೆ ಎಂದು ವ್ಯಂಗ್ಯವಾಡಿದ್ದಾರೆ.