ಆರೋಗ್ಯಕರ ಸಮಾಜ ನಿರ್ಮಾಣ ಇಂದಿನ ಯುವ ಜನಾಂಗದ ಮೇಲಿದೆ
ರಾಣೇಬೆನ್ನೂರು 08: ಆರೋಗ್ಯಕರ ಸಮಾಜ ನಿರ್ಮಾಣ ಇಂದಿನ ಯುವ ಜನಾಂಗದ ಮೇಲಿದೆ. ಯುವಕರು ಆಧುನಿಕ ಸಂಸ್ಕೃತಿಗೆ ಮಾರುಹೋಗದೆ ಭಾರತದ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಸುಸಂಸ್ಕೃತ ನಾಗರಿಕರಾಗಲು ಮುಂದಾಗಬೇಕಾದ ಅಗತ್ಯವಿದೆ ಎಂದು ನಗರ ಠಾಣಾ ಪಿ.ಎಸ್.ಐ.ಗಡ್ಡೆಪ್ಪ ಗುಂಜುಟಗಿ ಕರೆ ನೀಡಿದರು. ಅವರು, ನಗರ ಹೊರ ವಲಯದ ಆರ್. ಟಿ. ಇ. ಎಸ್, ಪದವಿ ಕಾಲೇಜು ಸಾವಕಾರ ಸಭಾಭವನದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಯೋಜಿಸಿದ್ದ, ನಶೆ ಮುಕ್ತ ಭಾರತ ರಾಷ್ಟ್ರೀಯ ಯುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಅನಿಷ್ಠವಾಗಿ ಕಾಡುತ್ತಿರುವ ಮಧ್ಯಪಾನ, ಧೂಮಪಾನ ಗಾಂಜಾ, ಚರಸ್, ಅಫೀಮ ಡ್ರಗ್ಸ್ ಮೊದಲಾದ ಮಾದಕ ಪದಾರ್ಥಗಳು ಯುವಜನರನ್ನು ದಾರಿ ತಪ್ಪಿಸುತ್ತಿದೆ. ಯುವಕರು, ತಮ್ಮ ಜೀವನ ಭವಿಷ್ಯದ ಭದ್ರತೆಗಾಗಿ, ಇದರಿಂದ ಮುಕ್ತವಾಗಿರಬೇಕು ಎಂದರು.
ಅಮಲು ಪದಾರ್ಥದ ನಶೆಯ ಗುಂಗಿನಲ್ಲಿ ತೇಲಾಡುತ್ತಿರುವ ಇಂದಿನ ಯುವಕರು, ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅತಿ ಹೆಚ್ಚಾಗಿ ಕಂಡುಬರುತ್ತಲ್ಲಿದೆ.ಇದರಿಂದ ಅವರು ಹೊರಬರಲಾರದೆ, ನಿತ್ಯವೂ ಪರಿತಪಿಸುತ್ತಾ, ಮಾನಸಿಕ ಖಿನ್ನತೆಯಿಂದ ಬಳಲುವಂತಾಗಿದೆ ಎಂದು ಇಂದಿನ ಬಹುತೇಕ ವಾಸ್ತವಿಕ ಸ್ಥಿತಿಯನ್ನು ವಿವರಿಸಿ ಮಾತನಾಡಿದರು. ಆರೋಗ್ಯ ಇಲಾಖೆಯ ಹಿರಿಯ ನಿರಕ್ಷಣಾಧಿಕಾರಿ ಡಾ. ನಾಗರಾಜ ಕುಡುಪಲಿ ಅವರು ಮಾತನಾಡಿ,ಇತಿಹಾಸದಲ್ಲಿ ಯುವ ಕುಸ್ತಿಪಟುಗಳ ತವರೂರು ಇಂದು ಏನಾಗಿದೆ ಎನ್ನುವುದನ್ನು ಆಲೋಚಿಸಿದಾಗ, ನಿಜಕ್ಕೂ ಇಂದು ಖೇದವೆನಿಸುತ್ತಿದೆ.
ತಾವು ಕಂಡಂತೆ, ರಾಣೇಬೆನ್ನೂರು ನಗರ ಮತ್ತು ತಾಲೂಕು ಬಹುತೇಕ ಯುವಕರಿಂದಲೇ ತುಂಬಿರುತ್ತಿತ್ತು. ಕುಸ್ತಿ ಕಲೆಯ ಕರಗತ ಮಾಡಿಕೊಳ್ಳುತ್ತಾ, ಜೊತೆಗೆ ಶಿಕ್ಷಣ ಅಧ್ಯಯನ, ನಂತರ ಜಾನಪದ ಕಲೆ, ಪರಂಪರೆ, ದೊಡ್ಡಾಟ, ಸಣ್ಣಾಟ, ನಾಟಕ ಮೊದಲಾದ ಕಲೆಗಳ, ಹವ್ಯಾಸಿ,ಕಲಾವಿದರ ನಾಡು ಇದಾಗಿತ್ತು. ಅಂದಿನ ಯುವಕರು ಮಾನಸಿಕ, ದೈಹಿಕ, ಬೌದ್ಧಿಕ, ಧರ್ಮ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಬೆಳವಣಿಗೆ ಮೂಲಕ, ಭಾರತದ ಸಂಸ್ಕೃತಿ ಪರಂಪರೆ ಅಳವಡಿಸಿಕೊಳ್ಳುತ್ತಿದ್ದರು. ಇದರಿಂದ, ಅವರಿಗೆ ಯಾವುದೇ ದುಶ್ಚಟಗಳಿಗೆ ಬಲಿಯಾಗುತ್ತಿರಲಿಲ್ಲ ಮತ್ತು ಅವಕಾಶವೇ ಸಿಗುತ್ತಿರಲಿಲ್ಲ. ಅದಕ್ಕಾಗಿ ಇಂದಿನ ಯುವಕರು ಈ ಚಟಗಳಿಗೆ ದಾಸರಾಗದೆ ತಮ್ಮ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಪ್ರೊ, ಸಿ.ಎ. ಹರಿಹರ ಅವರು , ಭವಿಷ್ಯದ ಯುವ ಜನಾಂಗವು, ಭಾರತದ ಭದ್ರತೆಗಾಗಿ, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದ್ದು, ಉತ್ತಮ ನಾಗರಿಕರಾಗಲು ಮುಂದಾಗಬೇಕು ಎಂದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ, ಸರಸ್ವತಿ ಬಮ್ಮನಾಳ, ನಗರ ಕಾರ್ಯದರ್ಶಿ ಪವನ್ ಕುಮಾರ್ ಇಟಗಿ, ಸಹ ಕಾರ್ಯದರ್ಶಿ, ಎಲ್ಲಮ್ಮ, ಸವಿತಾ, ತಾಲೂಕು ಸಂಚಾಲಕ ವಿನಾಯಕ ತಾವರಗೊಂದಿ, ಜಿಲ್ಲಾ ಎಸ್ ಎಫ್ ಡಿ ಪ್ರಮುಖ ಅಭಿಲಾಶ್ ಬಾದಾಮಿ, ಕಾರ್ಯಕರ್ತರಾದ ಬಸವರಾಜ ಎನ್, ನಂದೀಶ ಪೂಜಾರ, ಸೇರಿದಂತೆ ಎಬಿವಿಪಿ ಸದಸ್ಯರು ಕಾಲೇಜಿನ ಎಲ್ಲಾ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು