ಗುರುವಿನ ಮಾರ್ಗದರ್ಶನದಿಂದಲೇ ಭವ್ಯ ಭವಿಷ್ಯದ ನಿರ್ಮಾಣ

ಲೋಕದರ್ಶನ ವರದಿ

ಮೋಳೆ 12: ಇಡೀ ವಿಶ್ವವನ್ನೇ ಕಾಗದ ಮಾಡಿ, ಸಪ್ತ ಸಾಗರಗಳನ್ನೇ ಶಾಹಿ ಮಾಡಿ ಪುಸ್ತಕ ರಚಿಸಿದರೂ ಗುರುವಿನ ವರ್ಣನೆ ಮಾಡಲೂ ಸಾಧ್ಯವಿಲ್ಲ. ಗುರು ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಹೊತ್ತಿಸಿ ಜೀವನದ ದಾರಿ ತೋರುವಂತವನಾಗಿದ್ದಾರೆ. ಇಂತಹ ಗುರುವಿನ ಸ್ಮರಣೆ ಬಹಳ ಮುಖ್ಯವಾಗಿದೆ ಎಂದು ಸದಲಗಾದ ಗೀತಾ ಮಠದ ಶೃದ್ಧಾನಂದ ಶ್ರೀಗಳು ಹೇಳಿದರು.

ಇಂದು ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ 117 ನೇ ಜಯಂತೋತ್ಸವದ ನಿಮಿತ್ಯ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗುರುವಿನ ಮಾರ್ಗದರ್ಶನವಿಲ್ಲದೇ ನಾವೆಲ್ಲ ಬರೀ ಮನುಷ್ಯರಾಗಬಹುದೇ ವಿನಹಃ ಜ್ಞಾನಿಯಾಗಲು ಸಾಧ್ಯವಿಲ್ಲ ಎಂದರು. ಮಲ್ಲಿಕಾಜರ್ುನ ಮಹಾಸ್ವಾಮಿಗಳು ಬಹಳ ವರ್ಷ ಜುಗೂಳ ಗ್ರಾಮದಲ್ಲಿಯೇ ನೆಲೆಸಿ ತಮ್ಮ ಅಮೃತವಾಣಿಯಿಂದ ಈ ಗ್ರಾಮವನ್ನು ಪಾವನಗೊಳಿಸಿದ್ದಾರೆ. ಅವರು ಈ ಗ್ರಾಮವು ನನ್ನ ತವರು ಮನೆ ಇದ್ದಂತೆ ಎಂದು ಹೇಳುತ್ತಿದ್ದದ್ದನ್ನು  ಶ್ರೀಗಳು ನೆನಪಿಸಿಕೊಂಡರು.

ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀಗಳು, ಶಿರಗುಪ್ಪಿಯ ಹಿರಿಯ ವೈದ್ಯರಾದ ಡಾ. ಬಿ.ಬಿ. ಪಾಟೀಲ ವೇದಿಕೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾಮದ ಮಲ್ಲಾರಿಪಂತ ಕುಲಕರ್ಣಿ, ಗುರಗೌಡಾ ಪಾಟೀಲ, ತಾತ್ಯಾಸಾಬ ಪಾಟೀಲ, ಬಿ. ಆರ್. ಪಾಟೀಲ, ಕುಮಾರ ಮಿಣಚೆ, ಮೋಹನ ಜಾಧವ ಮುಂತಾದವರು ಉಪಸ್ಥಿತರಿದ್ದರು.ಮಲ್ಲಿಕಾರ್ಜುನ ಮಹಾಸ್ವಾಮಿಗಳ 117 ನೇ ಜನ್ಮದಿನದ ನಿಮಿತ್ಯ ಇಂದಿನಿಂದ 5 ದಿನಗಳ ಕಾಲ ಸಂಜೆ 6 ರಿಂದ 7 ರ ವರೆಗೆ ಮಲ್ಲಿಕಾರ್ಜುನ ದೇವಸ್ಥಾನದ ಸಭಾ ಭವನದಲ್ಲಿ ವಿವಿಧ ಶ್ರೀಗಳಿಂದ ಪ್ರವಚನ ನಡೆಯಲಿದೆ. ಅ. 14 ರಂದು ಬೆಳಗಿನ ಜಾವ 5.30 ರಿಂದ ಜಪಯೋಗ ನಡೆಯಲಿದೆ. ಅ. 15 ರಂದು ಮಧ್ಯಾಹ್ನ 3 ಗಂಟೆಗೆ ಸಕಲ ವಾದ್ಯಗಳೊಂದಿಗೆ ಮಲ್ಲಿಕಾರ್ಜುನ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಸಂಜೆ ಮಹಾಪ್ರಸಾದ ನೆರವೇರಲಿದೆ ಎಂದು ಮಲ್ಲಿಕಾರ್ಜುನ ವಿದ್ಯಾಪೀಠದ ಸಂಸ್ಥಾಪಕ ಗುರಗೌಡಾ ಪಾಟೀಲ ತಿಳಿಸಿದ್ದಾರೆ.