ಕೊಹ್ಲಿ ಬದಲು ಸ್ಮಿತ್‌ ಆಯ್ಕೆಗೆ ಕಾರಣ ಹೇಳಿದ ಬ್ರೆಟ್‌ ಲೀ

ನವದೆಹಲಿ, ಮೇ 26,ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್‌ ಕೊಹ್ಲಿಗಿಂತಲೂ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಅವರನ್ನೇ ಬೆಸ್ಟ್‌ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಿಕೊಳ್ಳುವುದಾಗಿ ಆಸ್ಟ್ರೇಲಿಯಾ ಮಾಜಿ ವೇಗಿ‌ ಬ್ರೆಟ್‌ ಲೀ ಹೇಳಿದ್ದಾರೆ.ಚೆಂಡು ವಿರೂಪಗೊಳಿಸಿದ‌ ಕಳಂಕದ ಬಳಿಕ ಸ್ಟೀವ್‌ ಸ್ಮಿತ್‌ ಕಮ್‌ಬ್ಯಾಕ್‌ ಮಾಡಿದ ರೀತಿಯ ಒಂದೇ ಕಾರಣಕ್ಕೆ ವಿರಾಟ್‌ ಕೊಹ್ಲಿ ಅವರಿಗಿಂತಲೂ ಆಸೀಸ್‌ನ ಮಾಜಿ ನಾಯಕನನ್ನೇ ಬೆಸ್ಟ್‌ ಎಂದು ಕರೆದಿರುವ ಲೀ, ಸ್ಟೀವ್‌ಗೆ ಡಾನ್‌ ಬ್ರಾಡ್ಮನ್‌ ರೀತಿಯಲ್ಲಿ ಛಾಪು ಮೂಡಿಸುವ ಸಾಮರ್ಥ್ಯವಿದೆ ಎಂದು ಗುಣಗಾನ ಮಾಡಿದ್ದಾರೆ.ಜಿಂಬಾಬ್ವೆಯ ಮಾಜಿ ಆಟಗಾರ ಪಾಮಿ ಎಂಬಾಂಗ್ವ ಜೊತೆಗೆ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿ ಮಾತನಾಡಿದ ಬ್ರೆಟ್‌ ಲೀ ಅವರನ್ನು ಸ್ಟೀವ್‌ ಮತ್ತು ಕೊಹ್ಲಿಯಲ್ಲಿ ಬೆಸ್ಟ್‌ ಬ್ಯಾಟ್ಸ್‌ಮನ್‌ ಆಯ್ಕೆ ಮಾಡುವಂತೆ ಕೇಳಲಾಗಿತ್ತು.
ಇದಕ್ಕೆ ಉತ್ತರಿಸಿದ ಲೀ, "ಇದು ಬಹಳ ಕಠಿಣ ಪ್ರಶ್ನೆ. ಇಬ್ಬರೂ ಆಟಗಾರರಲ್ಲಿನ ಹಲವು ಗುಣಗಳನ್ನು ನಾನು ಆನಂದಿಸುತ್ತೇನೆ. ಬೌಲಿಂಗ್‌ ದೃಷ್ಟಿಕೋನದಲ್ಲಿ ಹೇಳುವುದಾದರೆ ಇಬ್ಬರಲ್ಲಿ ಹೆಚ್ಚಿನ ಕೊರತೆಗಳಿಲ್ಲ. ಇಬ್ಬರೂ ಅಪ್ರತಿಮ ಬ್ಯಾಟ್ಸ್‌ಮನ್‌ಗಳು. ಕೊಹ್ಲಿ ತಾಂತ್ರಿಕವಾಗಿ ಬಲಿಷ್ಠರಾಗಿದ್ದಾರೆ. ಅಷ್ಟೇ ಉತ್ತಮ ನಾಯಕ ಕೂಡ. ಐಪಿಎಲ್‌ ಗೆದ್ದರೆ ನಿಜಕ್ಕೂ ಅವರಿಗೆ ತೃಪ್ತಿ ಸಿಗಲಿದೆ," ಎಂದಿದ್ದಾರೆ.
"ಕಳೆದ ಎರಡು ವರ್ಷಗಳಲ್ಲಿ ಸ್ಟೀವ್‌ ಸ್ಮಿತ್‌ ಹಲವು ಸಂಗತಿಗಳನ್ನು ಎದುರಿಸಿದ್ದಾರೆ. ಆದರೆ, ಕಳೆದ 12 ತಿಂಗಳಲ್ಲಿ ಆತ ತನ್ನ ಪ್ರದರ್ಶನ ಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾನೆ. ಹೀಗಾಗಿ ಕೊಹ್ಲಿ ಬದಲಿಗೆ ಸ್ಮಿತ್‌ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಡಾನ್‌ ಬ್ರಾಡ್ಮನ್‌ ಮಾದರಿಯಲ್ಲಿ ಛಾಪು ಮೂಡಿಸುವ ಸಾಮರ್ಥ್ಯ ಸ್ಮಿತ್‌ ಅವರಲ್ಲಿದೆ ಎಂಬುದು ನನ್ನ ವಿಶ್ವಾಸ," ಎಂದು ಹೇಳಿದ್ದಾರೆ.