ಉಚಿತ ಪ್ರಯಾಣ ಬಸ್‌ನಲ್ಲಿ ಜಡೆ ಜಗಳ: ಸೀಟ್ ಫೈಟ್ ದೃಶ್ಯ ಭಾರೀ ವೈರಲ್
ದೇವರಹಿಪ್ಪರಗಿ 23: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಚಿತ ಬಸ್ ಶಕ್ತಿ ಯೋಜನೆ ಬಿಟ್ಟಿದ್ದೇ ತಡ ಪುರುಷರಿಗಂತೂ ಸೀಟು ಸಿಗುತ್ತಿಲ್ಲ. ಮತ್ತೊಂದೆಡೆ ಬಸ್ ಪೂರ್ತಿ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಇಂತಹ ಸಮಯದಲ್ಲಿ ಮಹಿಳೆಯರು ಸೀಟಿಗಾಗಿ ಹೊಡೆದಾಡುತ್ತಿರುವ ದೃಶ್ಯ ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಅದರಂತೆಯೇ ಮತ್ತೊಂದು ಘಟನೆ ಎಂಬಂತೆ ದೇವರಹಿಪ್ಪರಗಿಯಿಂದ ತಾಳಿಕೋಟಿಗೆ ಹೋಗುವ ಬಸ್ಸಿನಲ್ಲಿ ಸೋಮವಾರ ಇಂತಹುದೇ ಒಂದು ಘಟನೆ ನಡೆದಿದೆ.ಬಸ್ನಲ್ಲೇ ಮಹಿಳೆಯರು ಸೀಟಿಗಾಗಿ ಮಾರಾಮಾರಿ ನಡೆಸಿದ ದೃಶ್ಯ ವೈರಲ್ ಆಗಿದೆ. ಸೋಮವಾರದಂದು ದೇವರಹಿಪ್ಪರಗಿ-ತಾಳಿಕೋಟಿಗೆ ಹೋಗುವ ಬಸ್ಸಿನಲ್ಲಿ ಮಹಿಳೆಯರು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಸೀಟಿಗಾಗಿ ಮಹಿಳೆ ಮಹಿಳೆಯರೇ ಅವಾಚ್ಯ ಶಬ್ದಗಳಿಂದ ಬೈದುಕೊಂಡು ಹೊಡೆದಾಡಿಕೊಂಡಿದ್ದಾರೆ. ಮಹಿಳೆಯರ ಹೊಡಿ-ಬಡಿ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಸರ್ಕಾರದ ಶಕ್ತಿ ಯೋಜನೆ ಹೆಣ್ಮಕ್ಕಳಿಗೆ ಭಾರೀ ಲಾಭ ಕೊಟ್ಟಿದೆ. ಆದರೆ ಹಲವೆಡೆ ಪ್ರಯಾಣಿಕರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗಿವೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತಿವೆ. ತಳ್ಳಾಟ, ನೂಕಾಟ ಸೇರಿದಂತೆ ಜಡೆ ಜಗಳ ಸಹ ನಡೆದಿದೆ. ಕೆಲವು ಭಾಗಗಳಲ್ಲಿ ತಳ್ಳಾಟ, ನೂಕಾಟದಿಂದ ಬಸ್ ಬಾಗಿಲು, ಕಿಟಕಿಯ ಸರಪಳಿ ಕಿತ್ತುಕೊಂಡು ಬಂದಿದೆ. ಅಷ್ಟೇ ಅಲ್ಲ ಇದೀಗ ಫ್ರೀ ಬಸ್ನಲ್ಲಿ ಸೀಟಿಗಾಗಿ ಮಾರಾಮಾರಿ ನಡೆದೇ ಬಿಟ್ಟಿದೆ. ಇದರಿಂದ ಪ್ರಯಾಣಿಕರಿಗೆ ಹಾಗೂ ನಿರ್ವಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಹಿಳೆಯರು ಸೀಟ್ ವಿಚಾರಕ್ಕೆ ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ. ಜಗಳ ಬಿಡಿಸಲು ಹೋದ ಗಂಡಸರು ಹೈರಾಣಗಿದ್ದಾರೆ. ಫ್ರೀ ಬಸ್ನಲ್ಲಿ ಸೀಟ್ ಸಿಗದೇ ಜಟಾಪಟಿ ಹೆಚ್ಚಾಗುತ್ತಿದೆ. ಮಹಿಳೆಯರ ಸೀಟ್ ಫೈಟ್ನ ದೃಶ್ಯ ಭಾರೀ ವೈರಲ್ ಆಗುತ್ತಿದೆ. ಸರ್ಕಾರ ಈಗಲಾದರೂ ಹೆಚ್ಚು ಬಸ್ಸುಗಳನ್ನು ಬಿಡುವ ಮೂಲಕ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಹುಡುಕಬೇಕಾಗಿದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.