ಶಾಖೆಯ ತೃತೀಯ ವಾರ್ಷಿಕೋತ್ಸವ ಆಚರಣೆ

ಲೋಕದರ್ಶನ ವರದಿ

ಬೆಟಗೇರಿ 03: ಗ್ರಾಮೀಣ ವಲಯದ ಸಹಕಾರ ಸಂಘ-ಸಂಸ್ಥೆಗಳು ಸಮಗ್ರ ಪ್ರಗತಿ ಸಾಧಿಸಬೇಕಾದರೆ ಸ್ಥಳೀಯರ ಸಹಾಯ, ಸಹಕಾರ ಅತ್ಯಂತ ಅವಶ್ಯಕ ಎಂದು ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

      ಗ್ರಾಮದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯಲ್ಲಿ ಶನಿವಾರ ನ.2ರಂದು ನಡೆದ ಇಲ್ಲಿಯ ಶಾಖೆಯ 3ನೇ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ಸ್ಥಳೀಯ ಗ್ರಾಮಸ್ಥರು ಶಾಖೆಯ ಸಮಗ್ರ ಪ್ರಗತಿಗೆ ನೀಡುತ್ತಿರುವ ಸಹಕಾರ ಶ್ಲಾಘಿನೀಯವಾಗಿದೆ ಎಂದರು. ಸ್ಥಳೀಯ ಶಾಖೆಯ ಸಲಹಾ ಸಮೀತಿ ಅಧ್ಯಕ್ಷ ಈರಣ್ಣ ದೇಯಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಂಗಯ್ಯ ಮಠದ ಸಾನಿಧ್ಯ ವಹಿಸಿ ಶ್ರೀ ಮಹಾಲಕ್ಷ್ಮೀ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ಬಳಿಕ ಸಿಹಿ ಹಂಚುವುದರ ಮೂಲಕ ಶಾಖೆಯ ತೃತೀಯ ವಾರ್ಷಿಕೋತ್ಸವ ಆಚರಿಸಲಾಯಿತು. ಶಾಖೆಯ ಮುಖ್ಯ ಕಾರ್ಯನಿರ್ವಾಹಕ ಪರಪ್ಪ ಗಿರೆಣ್ಣವರ ಶಾಖೆಯ ಪ್ರಗತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

      ಮಾಯಪ್ಪ ಬಾಣಸಿ, ಹಣಮಂತ ಸವತಿಕಾಯಿ, ಅಜ್ಜಪ್ಪ ಪೆದನ್ನವರ, ಬಸಪ್ಪ ಗೌಡರ, ಈಶ್ವರ ಮುಧೋಳ, ನಿಂಗಪ್ಪ ನೀಲಣ್ಣವರ, ರಮೇಶ ಮುಧೋಳ ಸೇರಿದಂತೆ ಸ್ಥಳೀಯ ಶ್ರೀ ಮಹಾಲಕ್ಷ್ಮೀ ಸಹಕಾರಿಯ ಸಲಹಾ ಸಮಿತಿ ಸದಸ್ಯರು, ಶೇರ ಮೆಂಬರ ಸದಸ್ಯರು, ಸಿಬ್ಬಂದಿ ವರ್ಗ, ಪೀಗ್ಮಿ ಸಂಗ್ರಹಕಾರರು, ಗ್ರಾಹಕರು, ಇತರರು ಇದ್ದರು.