ಬಾಕ್ಸಿಂಗ್ ಡೇ ಟೆಸ್ಟ್ : ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವನ್ ಸ್ಮಿತ್ ಆಸರೆ

ಮೆಲ್ಬೋರ್ನ್, ಡಿ 26 ಸ್ಟೀವನ್ ಸ್ಮಿತ್ (ಔಟಾಗದೆ 77 ರನ್) ಹಾಗೂ ಮಾರ್ನಸ್ ಲಾಬುಶೇನ್ (63 ರನ್) ಅವರ ಅರ್ಧಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಎರಡನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರಥಮ ಇನಿಂಗ್ಸ್ ನಲ್ಲಿ ಮೊದಲನೇ ದಿನ ಗೌರವ ಸಂಪಾಧಿಸಿದೆ.  ಇಲ್ಲಿನ, ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಆತಿಥೇಯರಿಗೆ ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ ನಿರ್ಧಾರ ಆರಂಭದಲ್ಲಿ ಟ್ರೆಂಟ್ ಬೌಲ್ಟ್ ಸಮರ್ಥಿಸಿಕೊಂಡರು. ಮೊದಲನೇ ಓವರ್ ನ ನಾಲ್ಕನೇ ಎಸೆತದಲ್ಲಿ ಆರಂಭಿಕ ಜೋ ಬರ್ನ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.  ನಂತರ, ಜತೆಯಾದ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಎರಡನೇ ವಿಕೆಟ್ ಗೆ 60 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. 64 ಎಸೆತಗಳಲ್ಲಿ ವಾರ್ನರ್ 41 ರನ್ ಗಳಿಸಿ ವ್ಯಾಗ್ನರ್ ಗೆ ವಿಕೆಟ್ ಒಪ್ಪಿಸಿದರು. ನಂತರ, ಕ್ರೀಸ್ ಗೆ ಬಂದ ಸ್ಟೀವನ್ ಸ್ಮಿತ್ ಅವರು ಲಾಬುಶೇನ್ ಜತೆಗೂಡಿ 83 ರನ್ ತಂಡಕ್ಕೆ ಕೊಡುಗೆಯಾಗಿ ನೀಡಿತು.   ಅದ್ಭುತ ಲಯದಲ್ಲಿರುವ ಮಾರ್ನಸ್ ಲಾಬುಶೇನ್ ನ್ಯೂಜಿಲೆಂಡ್ ಬೌಲರ್ ಗಳನ್ನು ಬೆಂಡೆತ್ತಿದರು. 149 ಎಸೆತಗಳನ್ನು ಎದುರಿಸಿದ ಅವರು 63 ರನ್ ಗಳಿಸಿದರು. ಇವರ ಅರ್ಧಶತಕದಲ್ಲಿ ಒಂದು ಸಿಕ್ಸರ್ ಹಾಗೂ ಆರು ಬೌಂಡರಿಗಳಿವೆ. ಕೆಲಕಾಲ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಮ್ಯಾಥ್ಯು ವೇಡ್ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.  ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಣಕ್ಕೆ ಇಳಿದ ಸ್ಟೀವನ್ ಸ್ಮಿತ್ ಸೊಗಸಾದ ಇನಿಂಗ್ಸ್ ಕಟ್ಟಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಅಜೇಯ 77 ರನ್ ಗಳಿಸಿ ಅಜೇಯರಾಗಿ ಉಳಿದರು. 192 ಎಸೆತಗಳಲ್ಲಿ 77 ರನ್ ಗಳಿಸಿದ್ದಾರೆ. ಇವರ ಅರ್ಧಶತಕದಲ್ಲಿ ಒಂದು ಸಿಕ್ಸರ್ ಹಾಗೂ ಎಂಟು ಬೌಂಡರಿಗಳಿವೆ. ಅರ್ಧಶತಕದ ಜತೆ ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ಅಗ್ರ 10 ಬ್ಯಾಟ್ಸ್ ಮನ್ ಗಳ ಪಟ್ಟಿಗೆ ಪ್ರವೇಶ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ನಾಯಕ ರಿಕಿ ಪಾಂಟಿಂಗ್ ಅಗ್ರ ಸ್ಥಾನದಲ್ಲಿದ್ದಾರೆ.  ಮತ್ತೊಂದು ತುದಿಯಲ್ಲಿ ಟ್ರಾವಿಸ್ ಹೆಡ್ 25 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  ನ್ಯೂಜಿಲೆಂಡ್ ಪರ ಕಾಲಿನ್ ಡಿ ಗ್ರಾಂಡ್ಹೋಮ್ 48 ರನ್ ನೀಡಿ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಮತ್ತು ನೀಲ್ ವ್ಯಾಗ್ನರ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.  ಆಸ್ಟ್ರೇಲಿಯಾ  ಪ್ರಥಮ ಇನಿಂಗ್ಸ್: 90 ಓವರ್ ಗಳಿಗೆ 257/4 (ಸ್ಟೀವನ್ ಸ್ಮಿತ್ ಔಟಾಗದೆ 77, ಮಾರ್ನಸ್ ಲಾಬುಶೇನ್ 63, ಡೇವಿಡ್ ವಾರ್ನರ್ 41; ಕಾಲಿನ್ ಡಿ ಗ್ರಾಂಡ್ಹೋಮ್ 48 ಕ್ಕೆ 2, ಟ್ರೆಂಟ್ ಬೌಲ್ಟ್ 60 ಕ್ಕೆ 1, ನೀಲ್ ವ್ಯಾಗ್ನರ್ 40 ಕ್ಕೆ 1)