ಉಡಾನ್ ಉಡೆ, ಅ 12: ಆರು ಬಾರಿ ಚಾಂಪಿಯನ್ ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಸೆಮಿಫೈನಲ್ ಹಣಾಹಣಿಯಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಭಾರತದ ಮೇರಿ ಕೋಮ್ ಅವರು ಶನಿವಾರ ನಡೆದ 51 ಕೆ.ಜಿ ವಿಭಾಗದ ಫ್ಲೈ ವೇಟ್ ವಿಭಾಗದಲ್ಲಿ ಟರ್ಕಿಯ ಎರಡನೇ ಶ್ರೇಯಾಂಕಿತೆ ಬುಸೆನಾಜ್ ಸಕಿರೋಗ್ಲು ವಿರುದ್ಧ 1-4 ಅಂತರದಲ್ಲಿ ಸೊತು ನಿರಾಸೆ ಅನುಭವಿಸಿದರು. ಪಂದ್ಯದ ಮೊದಲ ಸುತ್ತಿನಲ್ಲಿ ಮೇರಿ ಕೋಮ್ ಉತ್ತಮ ಪಂಚ್ಗಳು ಹಾಗೂ ಲಾಕ್ಗಳ ಮೂಲಕ ಎಲ್ಲರ ಗಮನ ಸೆಳೆದರು. ಆದರೆ, ಎದುರಾಳಿ ಟರ್ಕಿಯ ಬಾಕ್ಸರ್ ಕೂಡ ಅದೇ ರೀತಿ ಪ್ರದರ್ಶನ ತೋರಿದರು. ನಂತರದ, ಸುತ್ತಿನಲ್ಲಿ ಪುಟಿದೆದ್ದ ಯುರೋಪಿಯನ್ ಚಾಂಪಿಯನ್ ಬುಸೆನಾಜ್ ಅವರು ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ಗೆ ಭಾರಿ ಪೈಪೋಟಿ ನೀಡಿ ಪಂದ್ಯದ ಹಿಡತವನ್ನು ನಿಯಂತ್ರಿಸಿದರು. ಇದರ ಫಲವಾಗಿ ಮುಂದಿನ ನಾಲ್ಕು ಸುತ್ತುಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡರು. ಒಟ್ಟಾರೆ, ಪಂದ್ಯದ ಮುಕ್ತಾಯದ ವೇಳೆಗೆ ಟರ್ಕಿಯ ಬಾಕ್ಸರ್ 29-28, 27-30, 28-29, 28-29, 27-30 ಅಂತರದಲ್ಲಿ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಂಡರು. ಆ ಮೂಲಕ ಫೈನಲ್ಗೆ ತಲುಪಿದ್ದಾರೆ.